ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದ್ದೇನು?

ಬೆಂಗಳೂರು, ಆ. 26: ‘ಕಾಂಗ್ರೆಸ್ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ಹಿಂದೆ ಸರಿಯುವ ಅಥವಾ ಕಾಂಗ್ರೆಸ್ (Indian National Congress) ಪಕ್ಷವನ್ನು ಯಾವುದೇ ಸಂದರ್ಭದಲ್ಲಿಯೂ ಬಿಡುವ ಪ್ರಶ್ನೆಯೇ ಇಲ್ಲ. ನಾನು ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ' ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ (K. H. Muniyappa) ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ನಾನು ಪಕ್ಷದಿಂದ ದೂರ ಆಗಿದ್ದೇನೆಂಬುದು ಕೇವಲ ಊಹಾಪೆಪೋಹ ಅಷ್ಟೇ. ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ನಾವು ಅಸಮಾಧಾನವಿದ್ದರೂ ಪಕ್ಷದ ದೃಷ್ಟಿಯಿಂದ ಒಪ್ಪಿಕೊಳ್ಳಬೇಕಾಗುತ್ತದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೂ ನನ್ನ ಜೊತೆಗೆ ಮಾತನಾಡಿದ್ದಾರೆ' ಎಂದು ತಿಳಿಸಿದರು.
‘ಆರೋಗ್ಯ ಸಚಿವ ಡಾ.ಸುಧಾಕರ್ ಅವರ ತಂದೆಯೊಂದಿಗೆ ನನಗೆ 40 ವರ್ಷದ ಒಡನಾಟವಿದೆ. ಡಾ.ಸುಧಾಕರ್ ಜೊತೆಗೂ ಒಡನಾಟವಿದೆ. ಅದು ರಾಜಕೀಯ ವಿಚಾರಕ್ಕಾಗಿ ಅಲ್ಲ. ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಸಮುದಾಯಕ್ಕೆ ಸಂಬಂಧಿಸಿದ ವಿಚಾರಕ್ಕಾಗಿ ಅವರನ್ನು ಭೇಟಿ ಮಾಡಿದ್ದೇನೆ. ಆದಿಜಾಂಬವ ಸಮುದಾಯದ ಮಠ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಮಠ. ಕಡಪ, ಆಂಧ್ರ, ತಮಿಳುನಾಡಿನಲ್ಲಿ ಮಠಗಳಿವೆ' ಎಂದು ಅವರು ಸ್ಪಷ್ಟಪಡಿಸಿದರು.
ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ನೀಡಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಆವಣಿಯಲ್ಲಿ ಮಠದ ವಿಚಾರವಾಗಿ ಚರ್ಚಿಸಿದ್ದೇನೆ. ಮಠಕ್ಕೆ ಭೂಮಿಯನ್ನೂ ಕೊಡಬೇಕು, ಅನುದಾನವನ್ನೂ ನೀಡಬೇಕು. ಮಠ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಂಸ್ಥೆ ಮಾಡಬೇಕೆಂಬ ಉದ್ದೇಶಕ್ಕಾಗಿ ಸಚಿವ ಸುಧಾಕರ್ ಮೂಲಕ ಸಿಎಂ ಭೇಟಿ ಮಾಡಿದ್ದೇನೆ' ಎಂದು ಅವರು ವಿವರಣೆ ನೀಡಿದರು.
-----------------
‘ಹಿರಿಯ ಮುಖಂಡ ಗುಲಾಂ ನಬಿ ಆಝಾದ್ ನಲವತ್ತು ವರ್ಷಗಳಿಂದ ಪಕ್ಷದಲ್ಲಿ ಇದ್ದವರು. ಅವರು ಹೀಗೆ ರಾಜೀನಾಮೆ ನೀಡಬಾರದಿತ್ತು. ಪಕ್ಷದಲ್ಲಿನ ಬಹಳಷ್ಟು ವಿಚಾರಗಳಿಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಪಕ್ಷದಲ್ಲೇ ಮುಂದುವರಿಯುತ್ತೇನೆ'
-ಕೆ.ಎಚ್.ಮುನಿಯಪ್ಪ ಮಾಜಿ ಸಂಸದ







