ಭಾರತೀಯರ ನಿಂದನೆ, ಹಲ್ಲೆ: ಟೆಕ್ಸಾಸ್ ನ ಮಹಿಳೆಯನ್ನು ಬಂಧಿಸಿದ ಪೊಲೀಸರು

ನ್ಯೂಯಾರ್ಕ್, ಆ.26: ಭಾರತೀಯರನ್ನು ಗುರಿಯಾಗಿಸಿ ಜನಾಂಗೀಯ ನಿಂದನೆ ಮಾಡಿ, ಭಾರತೀಯ ಅಮೆರಿಕನ್ನರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೆಕ್ಸಿಕೋದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಟೆಕ್ಸಾಸ್ನ ದಲ್ಲಾಸ್ನ ರೆಸ್ಟಾರೆಂಟ್ ಒಂದರ ಪಾರ್ಕಿಂಗ್ ಏರಿಯಾದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡ್ ಅಪ್ಟನ್ ಎಂದು ಗುರುತಿಸಲಾಗಿದ್ದು ಈಕೆಯನ್ನು ದೈಹಿಕ ಗಾಯವನ್ನು ಉಂಟುಮಾಡುವ ಆರೋಪ ಹಾಗೂ ಭಯೋತ್ಪಾದಕ ಬೆದರಿಕೆಗಳ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೆಸ್ಟಾರೆಂಟ್ ನ ಪಾರ್ಕಿಂಗ್ ಪ್ರದೇಶದಲ್ಲಿದ್ದ ಭಾರತೀಯ ಅಮೆರಿಕನ್ನರ ಗುಂಪಿನ ಬಳಿ ಬಂದ ಆ ಮಹಿಳೆ ಅಸಭ್ಯ ಪದ ಬಳಸಿ ಜನಾಂಗೀಯ ನಿಂದನೆ ಮಾಡಿದ್ದಾಳೆ. ‘ಭಾರತೀಯರನ್ನು ನಾನು ದ್ವೇಷಿಸುತ್ತೇನೆ. ಉತ್ತಮ ಬದುಕನ್ನು ಅರಸಿಕೊಂಡು ಅವರು ಅಮೆರಿಕಕ್ಕೆ ಬರುತ್ತಾರೆ. ಭಾರತದಲ್ಲಿ ಜೀವನವು ತುಂಬಾ ಶ್ರೇಷ್ಟವಾಗಿದ್ದರೆ ಮತ್ತೇಕೆ ಇಲ್ಲಿಗೆ ಬರುತ್ತೀರಿ? ಅಮೆರಿಕಕ್ಕೆ ಬಂದು ಎಲ್ಲವನ್ನೂ ಉಚಿತವಾಗಿ ಪಡೆಯಬೇಕೆಂದು ಬಯಸುತ್ತೀರಿ.
ನೀವು ಭಾರತೀಯರು ಎಲ್ಲೆಡೆ ಇದ್ದೀರಿ, ನಿಮ್ಮಿಂದ ನಾವು ಸಾಕಷ್ಟು ಅನುಭವಿಸಿದ್ದೇವೆ. ಈ ದೇಶವನ್ನು ಹಾಳು ಮಾಡುತ್ತಿದ್ದೀರಿ, ವಾಪಾಸು ಹೋಗಿ.. ನಾನೋರ್ವ ಮೆಕ್ಸಿಕನ್ ಅಮೆರಿಕನ್. ನಾನಿಲ್ಲೇ ಹುಟ್ಟಿದವಳು. ನೀವೆಲ್ಲಿ ಹುಟ್ಟಿದ್ದೀರಿ ? ಎಂದು ಅವಾಚ್ಯವಾಗಿ ನಿಂದಿಸಿ, ಓರ್ವ ಭಾರತೀಯ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳಲು ಯತ್ನಿಸಿ ಅವಳ ಮೇಲೆ ಹಲ್ಲೆ ನಡೆಸಿದ್ದಾಳೆ.
ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಮಹಿಳೆಯ ನಿಂದನೆ ಮುಂದುವರಿಯುತ್ತಿದ್ದಂತೆಯೇ ಭಾರತೀಯ ಅಮೆರಿಕನ್ ಮಹಿಳೆಯು ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರು ತಕ್ಷಣ ರೆಸ್ಟಾರೆಂಟ್ನ ಪಾರ್ಕಿಂಗ್ ಪ್ರದೇಶಕ್ಕೆ ಆಗಮಿಸಿ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.