'ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫೆರ್ನಾಂಡಿಸ್’ ಪುಸ್ತಕ ಬಿಡುಗಡೆ

ಮಂಗಳೂರು, ಆ. 26: ಲೇಖಕ ಡಾ.ರಾಹುಲ್ ರಾಮಗುಂಡಂ ಅವರು ಬರೆದಿರುವ ಕೇಂದ್ರದ ರಕ್ಷಣಾಖಾತೆಯ ಮಾಜಿ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಅವರ ಜೀವನ ಚರಿತ್ರೆ ‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫೆರ್ನಾಂಡಿಸ್’ ಪುಸ್ತಕ ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಬಿಷಪ್ ಪೀಟರ್ ಪೌಲ್ ಸಲ್ದಾನ, ರಕ್ಷಣಾ ಸಚಿವರಾಗಿ ಜಾರ್ಜ್ ನಿರ್ವಹಿಸಿದ ಪಾತ್ರ, ಭಾರತ- ಪಾಕಿಸ್ತಾನ ಯುದ್ದ ಸಂದರ್ಭ ಯುದ್ಧ ಭೂಮಿಗೆ ತೆರಳಿ ಅವರು ಸೈನಿಕರನ್ನು ಹುರಿದುಂಬಿಸುತ್ತಿದ್ದ ರೀತಿ, ಪರ್ವತ, ನದಿಗಳ ದುರ್ಗಮ ಹಾದಿಯಲ್ಲಿ ಕೊಂಕಣ ರೈಲ್ವೆ ಯೋಜನೆ ಜಾರಿಗೊಳಿಸಿದ ಪರಿ ಜಾರ್ಜ್ ಅವರು ಏನು ಎನ್ನುವುದನ್ನು ದೇಶಕ್ಕೆ ತೋರಿಸಿದೆ ಎಂದರು.
ಅವರು ನಮ್ಮ ಮಣ್ಣಿನ ಮಗ, ನಮ್ಮ ಸಂಸ್ಥೆಯ ವಿದ್ಯಾರ್ಥಿ ಎನ್ನುವುದು ನಮಗೆ ಅಭಿಮಾನವಿದೆ. ಜಾರ್ಜ್ ಅವರು ಧ್ವನಿ ಇಲ್ಲದ ಜನರಿಗೆ ಧ್ವನಿಯಾಗಿದ್ದರು. ಸಾಮಾನ್ಯ ಟ್ಯಾಕ್ಸಿ ಚಾಲಕರು, ರೈಲ್ವೆ ನೌಕರರು ಮುಂತಾದ ಸಾಮಾನ್ಯ ಕಾರ್ಮಿಕ ವರ್ಗದ ಜನರ ಬದುಕು ಸುಧಾರಣೆಯ ಬಗ್ಗೆ ಅವರಿಗೆ ಕಾಳಜಿ ಇತ್ತು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಅವರಲ್ಲಿ ನಿಖರವಾದ ಪರಿಕಲ್ಪನೆ ಇತ್ತು ಎಂಬುದನ್ನು ರಾಮಗುಂಡಂ ಅವರು ತಾನು ನಡೆಸಿದ 12 ವರ್ಷಗಳ ಸಂಶೋಧನೆ ಆಧರಿಸಿ ಈ ಮೌಲಿಕ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಈ ಪುಸ್ತಕಕ್ಕಾಗಿ ವಿವಿಧ ದಾಖಲೆಗಳು, ಮೂಲಗಳನ್ನು ಅಭ್ಯಸಿಸಿದ್ದಾರೆ. ನೂರಾರು ಮಂದಿಯನ್ನು ಸಂದರ್ಶಿಸಿದ್ದಾರೆ ಎಂದು ಅವರು ಹೇಳಿದರು.
ಕೃತಿಯ ಲೇಖಕ ಡಾ.ರಾಹುಲ್ ರಾಮಗುಂಡಂ, ಸಂತ ಅಲೋಶಿಯಸ್ ಕಾಲೇಜುರೆಕ್ಟರ್ ಫಾ.ಮೆಲ್ವಿನ್ ಜೋಸ್ ಪಿಂಟೋ, ಕುಲಸಚಿವ ಆಲ್ವಿನ್ ಡೇಸ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಕಾಲಿನ್ ಡಿಸಿಲ್ವ, ಪ್ರಾಧ್ಯಾಪಕಿ ಡಾ.ಮೋನಾ ಮೆಂಡೋನ್ಸಾ, ಕಾರ್ಯಕ್ರಮದ ಸಂಚಾಲಕ ವಿಲಿಯಂ ಪಾಯ್ಸ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಮೈಕಲ್ ಫೆರ್ನಾಂಡಿಸ್ (ದಿ. ಜಾರ್ಜ್ ಫೆರ್ನಾಂಡೀಸ್ ಸಹೋದರ) ಮಾತನಾಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಎಲ್ಲ ಪಕ್ಷ, ಸಂಘಟನೆಗಳ ಮುಖಂಡರ ಪ್ರೀತಿ- ಗೌರವಗಳಿಗೆ ಜಾರ್ಜ್ ಫೆರ್ನಾಂಡಿಸ್ ಪಾತ್ರರಾಗಿದ್ದರು ಎಂದರು.
ಒಪ್ಪಿತವಲ್ಲದ ವಿಚಾರವನ್ನು ನೇರವಾಗಿ ವಿರೋಧಿಸುವ ಗುಣವನ್ನು ಮನೆಯಿಂದಲೇ ಅವರು ಆರಂಭಿಸಿದ್ದರು. ಜಾರ್ಜ್ ವಕೀಲರಾಗಬೇಕೆಂದು ತಂದೆಯವರು ಬಯಸಿದ್ದರು. ಆದರೆ ಜಾರ್ಜ್‌ಗೆ ಇದು ಸಮ್ಮತವಿರಲಿಲ್ಲ. ದುಡಿಯುವ ವರ್ಗ, ಜನಸಾಮಾನ್ಯ ಬಗ್ಗೆ ಅವರಿಗಿದ್ದ ಅತೀವ ಪ್ರೀತಿ, ಕಾಳಜಿ ಅವರನ್ನು ಜನರ ನಾಯಕನಾಗಿ ರೂಪಿಸಿದೆ ಎಂದು ಅವರು ಹೇಳಿದರು.