ಗುರುಗ್ರಾಮ: ಅಮೆರಿಕನ್ ಮಹಿಳೆಯ ಅತ್ಯಾಚಾರ; ಲಕ್ಷಾಂತರ ರೂ. ವಂಚನೆ

ಗುರುಗ್ರಾಮ: ಅಮೆರಿಕನ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಬಲವಂತವಾಗಿ ಗರ್ಭಪಾತ ಮಾಡಿಸಿ, 50 ಲಕ್ಷ ರೂಪಾಯಿ ನೀಡದಿದ್ದರೆ ಆಕೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ವ್ಯಕ್ತಿಯ ಜತೆ ಸಂಬಂಧ ಹೊಂದಿದ್ದ ಅವಧಿಯಲ್ಲಿ ತನಗೆ 13 ಲಕ್ಷ ರೂಪಾಯಿ ವಂಚಿಸಿದ್ದಾಗಿ 42 ವರ್ಷ ವಯಸ್ಸಿನ ಮಹಿಳೆ ಬುಧವಾರ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆತನ ಜತೆಗಿನ ಸಂಬಂಧ ಕಡಿದುಕೊಂಡ ಬಳಿಕ ಮತ್ತೆ ಸಂಪರ್ಕಿಸಿ, 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ. ಇದನ್ನು ನೀಡದಿದ್ದರೆ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುವುದಾಗಿ ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಮಹಿಳೆ 2014ರಲ್ಲಿ ತಮ್ಮ 11 ವರ್ಷದ ಮಗಳಿಗೆ ಚಿಕಿತ್ಸೆ ಸಲುವಾಗಿ ಭಾರತಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಗುರುಗ್ರಾಮದ ಸೌತ್ ಸಿಟಿಯಲ್ಲಿ ವಾಸವಿದ್ದರು. 2017ರ ಆಗಸ್ಟ್ ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಮೀರಠ್‍ನ ಸಚಿನ್ ಕುಮಾರ್ ಎಂಬವರ ಪರಿಚಯವಾಗಿದೆ. ಬಳಿಕ ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದರು. ತನ್ನ ಪತ್ನಿಯ ಜತೆ ವ್ಯಾಜ್ಯವಿರುವುದಾಗಿ ಮಹಿಳೆಯನ್ನು ನಂಬಿಸಿ ಹಣ ಪಡೆದಿದ್ದ ಎಂದು ದೂರು ನೀಡಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಸಚಿನ್, ಆಕೆ ಗರ್ಭಿಣಿಯಾದಾಗ ವಿವಾಹವಾಗುವ ಭರವಸೆ ನೀಡಿದ್ದ. ಈ ಪ್ರಕರಣದಲ್ಲಿ ಆತನ ತಾಯಿ ಕಾಂತಾ ಉಪಾಧ್ಯಾಯ ಮತ್ತು ಪತ್ನಿ ಸಮನ್ವಿತಾ ಹಜ್ರಾ ಅವರ ಪಾತ್ರವೂ ಇದೆ ಎಂದು ಆಪಾದಿಸಲಾಗಿದೆ.
"2018ರ ಮಾರ್ಚ್‍ನಲ್ಲಿ ಮಾದಕವಸ್ತು ಬೆರಸಿದ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದ. ಪ್ರತಿರೋಧ ವ್ಯಕ್ತಪಡಿಸಿದಾಗ ವಿವಾಹವಾಗುವುದಾಗಿ ಭರವಸೆ ನೀಡಿದ. 2018ರ ಮೇ ತಿಂಗಳಲ್ಲಿ ಗರ್ಭಿಣಿ ಎಂದು ತಿಳಿದಾಗ, ಗರ್ಭಪಾತಕ್ಕೆ ಒತ್ತಾಯಿಸಿದ. ದೇವಾಲಯವೊಂದಕ್ಕೆ ಕರೆದೊಯ್ದು ವಿವಾಹದ ನಾಟಕವಾಡಿದ" ಎಂದು ವಿವರಿಸಿದ್ದಾರೆ.
ಏತನ್ಮಧ್ಯೆ ನನ್ನ ಡೆಬಿಟ್ ಕಾರ್ಡ್, ಪಾಸ್‍ವರ್ಡ್ ಹಾಗೂ ಇ-ಮೇಲ್ ಪಾಸ್‍ವರ್ಡ್ ಪಡೆದು ಹಣ ಪಡೆಯಲು ಆರಂಭಿಸಿದ. ಆತ ತನ್ನ ಪತ್ನಿ ಸಮನ್ವಿತಾ ಜತೆ ಈಗಲೂ ವಾಸವಿದ್ದಾನೆ ಎಂದು ತಿಳಿದು ಆಘಾತವಾಗಿದೆ ಎಂದು ಮಹಿಳೆ ಹೇಳಿದ್ದಾರೆ.







