ಆಧಾರ್-ವೋಟರ್ ಐಡಿ ಜೋಡಣೆ ಐಚ್ಛಿಕವೇ

‘‘ನನ್ನ ಮತದಾರ ಗುರುತು ಚೀಟಿಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿದ್ದರೆ, ಗುರುತು ಚೀಟಿಯು ಒಂದು ವರ್ಷದಲ್ಲಿ ರದ್ದುಗೊಳ್ಳುತ್ತದೆ ಎಂದು ನನಗೆ ಕರೆ ಮಾಡಿದ ಅಧಿಕಾರಿ ಹೇಳಿದ್ದಾರೆ’’ ಎಂದು ದಿಲ್ಲಿಯ ಲೇಖಕ ಹಾಗೂ ಸಾರ್ವಜನಿಕ ನೀತಿ ಪರಿಣತ ಮೇಘನಾದ್ ಎಸ್. ಹೇಳಿದ್ದಾರೆ. ಅವರಿಗೆ ಆಗಸ್ಟ್ 12ರಂದು ರಾಜ್ಯ ಚುನಾವಣಾ ಆಯೋಗದ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರು ಕರೆ ಮಾಡಿದ್ದಾರೆ.ಇದನ್ನು ಯಾಕೆ ಕಡ್ಡಾಯ ಮಾಡುತ್ತೀರಿ? ಎಂದು ಮೇಘನಾದ್ ಕೇಳಿದಾಗ, ‘‘ಮೇಲಿನಿಂದ ಆದೇಶ ಬಂದಿದೆ’’ ಎಂದು ಆ ಅಧಿಕಾರಿ ಉತ್ತರಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕುವುದಕ್ಕಾಗಿ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಜೋಡಣೆ ಮಾಡುವ ಅಭಿಯಾನವೊಂದನ್ನು ಭಾರತೀಯ ಚುನಾವಣಾ ಆಯೋಗ ಆಗಸ್ಟ್ 1ರಿಂದ ಆರಂಭಿಸಿದೆ. ಈ ಪ್ರಕ್ರಿಯೆ ಐಚ್ಛಿಕವಾಗಿದೆ ಎಂಬುದಾಗಿ ಕೇಂದ್ರ ಸರಕಾರವು ಸಂಸತ್‌ನಲ್ಲಿ ಹೇಳಿದೆ. ಆದರೆ, ಇತ್ತೀಚಿನ ವಾರಗಳಲ್ಲಿ, ಚುನಾವಣಾ ಅಧಿಕಾರಿಗಳು ಹಲವು ಮತದಾರರಿಗೆ ಕರೆಗಳನ್ನು ಮಾಡಿ, ಗುರುತು ಚೀಟಿಗಳನ್ನು ಆಧಾರ್‌ನೊಂದಿಗೆ ಜೋಡಿಸುವುದು ಕಡ್ಡಾಯ ಎಂದು ಹೇಳಿದ್ದಾರೆ.
‘‘ನನ್ನ ಮತದಾರ ಗುರುತು ಚೀಟಿಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿದ್ದರೆ, ಗುರುತು ಚೀಟಿಯು ಒಂದು ವರ್ಷದಲ್ಲಿ ರದ್ದುಗೊಳ್ಳುತ್ತದೆ ಎಂದು ನನಗೆ ಕರೆ ಮಾಡಿದ ಅಧಿಕಾರಿ ಹೇಳಿದ್ದಾರೆ’’ ಎಂದು ದಿಲ್ಲಿಯ ಲೇಖಕ ಹಾಗೂ ಸಾರ್ವಜನಿಕ ನೀತಿ ಪರಿಣತ ಮೇಘನಾದ್ ಎಸ್. ಹೇಳಿದ್ದಾರೆ. ಅವರಿಗೆ ಆಗಸ್ಟ್ 12ರಂದು ರಾಜ್ಯ ಚುನಾವಣಾ ಆಯೋಗದ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರು ಕರೆ ಮಾಡಿದ್ದಾರೆ.
ಇದನ್ನು ಯಾಕೆ ಕಡ್ಡಾಯ ಮಾಡುತ್ತೀರಿ? ಎಂದು ಮೇಘನಾದ್ ಕೇಳಿದಾಗ, ‘‘ಮೇಲಿನಿಂದ ಆದೇಶ ಬಂದಿದೆ’’ ಎಂದು ಆ ಅಧಿಕಾರಿ ಉತ್ತರಿಸಿದ್ದಾರೆ.
ತನ್ನ ಮತ್ತು ಅಧಿಕಾರಿ ನಡುವಿನ ಮಾತುಕತೆಯ ವಿವರಗಳನ್ನು ಅವರು ಟ್ವಿಟರ್‌ನಲ್ಲಿ ಹಾಕಿದಾಗ, ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು, ಈ ಪ್ರಕ್ರಿಯೆಯು ಐಚ್ಛಿಕವಾಗಿದೆ ಹಾಗೂ ನಿಮ್ಮ ಮತದಾರರ ಗುರುತು ಚೀಟಿ ರದ್ದಾಗುವುದಿಲ್ಲ ಎಂಬ ಸ್ಪಷ್ಟೀಕರಣವನ್ನು ನೀಡಿದರು. ಬ್ಲಾಕ್ ಮಟ್ಟದ ಅಧಿಕಾರಿಗಳಲ್ಲಿ ಉಂಟಾಗಿರುವ ಗೊಂದಲವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ ಅವರು, ‘‘ಅವರಿಗೆ ಮರು ತರಬೇತಿ ನೀಡಬೇಕಾಗಿದೆ’’ ಎಂದರು.
ಆದರೆ, ಇದು ಬ್ಲಾಕ್ ಮಟ್ಟದ ಅಧಿಕಾರಿಗಳ ತಪ್ಪಲ್ಲ. ಕಾನೂನೊಂದರ ಆಧಾರದಲ್ಲಿ ಈ ಪ್ರಕ್ರಿಯೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರ ಪ್ರಕಾರ, ತಮ್ಮ ಮತದಾರರ ಗುರುತಿನ ಚೀಟಿಗಳಿಗೆ ತಮ್ಮ ಆಧಾರ್ ಸಂಖ್ಯೆಗಳನ್ನು ಜೋಡಿಸುವುದರಿಂದ ತಪ್ಪಿಸಿಕೊಳ್ಳಲು ನಾಗರಿಕರಿಗೆ ಅಸಾಧ್ಯವೆಂಬಂತಾಗಿದೆ. ಅದೂ ಅಲ್ಲದೆ, ಈ ಎರಡು ದಾಖಲೆಗಳನ್ನು ಕ್ಷಿಪ್ರವಾಗಿ ಜೋಡಿಸುವಂತೆ ಕಿರಿಯ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ.
ಕಾನೂನು ವ್ಯವಸ್ಥೆ
ಮತದಾರರ ಗುರುತು ಚೀಟಿ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಿಸುವುದಕ್ಕೆ ಸಂಬಂಧಿಸಿದ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸರಕಾರ ಡಿಸೆಂಬರ್‌ನಲ್ಲಿ ತಂದಿತು. ಇದನ್ನು ಪ್ರತಿಪಕ್ಷಗಳು ದೊಡ್ಡದಾಗಿ ಪ್ರತಿಭಟಿಸಿದವು. ಈ ಉಪಕ್ರಮವು ಖಾಸಗಿತನದ ಮೂಲಭೂತ ಹಕ್ಕನ್ನು ದಮನಿಸುತ್ತದೆ ಎಂದು ಪ್ರತಿಪಕ್ಷಗಳು ವಾದಿಸಿದವು.
ಈ ಪ್ರಕ್ರಿಯೆಯು ಐಚ್ಛಿಕವಾಗಿರುತ್ತದೆ ಎಂಬುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಅಂದು ಹೇಳಿಕೊಂಡಿದ್ದರು.
ಆದರೆ, ಕಾನೂನಿನ ಪಠ್ಯವು ಬೇರೆಯದನ್ನು ಹೇಳುತ್ತದೆ. ‘‘ಯಾರಿಗಾದರೂ ಆಧಾರ್ ಸಂಖ್ಯೆಯನ್ನು ಒದಗಿಸಲು ಅಸಾಧ್ಯವಾದರೂ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವರು ಅರ್ಜಿ ಹಾಕಿದರೆ ತಿರಸ್ಕರಿಸಬಾರದು ಮತ್ತು ಮತದಾರರ ಪಟ್ಟಿಯಲ್ಲಿರುವ ಯಾವುದೇ ಹೆಸರುಗಳನ್ನು ಅಳಿಸಬಾರದು...’’ ಎಂದು ಪಠ್ಯ ಹೇಳುತ್ತದೆ. ಆದರೆ, ಅದು ಮುಂದುವರಿದು, ‘‘ಇದಕ್ಕೆ ಕೊಡುವ ಸಕಾರಣಗಳನ್ನು ಪರಿಗಣಿಸಬಹುದಾಗಿದೆ’’ ಎಂದು ಕಾನೂನು ಹೇಳುತ್ತದೆ.
ಜೂನ್‌ನಲ್ಲಿ, ಕಾನೂನಿಗೆ ಚಾಲನೆ ಕೊಡುವುದಕ್ಕಾಗಿ ನಿಯಮಗಳನ್ನು ಹೊರಡಿಸಿತು. ಈ ನಿಯಮಗಳ ಪ್ರಕಾರ, ವ್ಯಕ್ತಿಯೊಬ್ಬರು ಚುನಾವಣಾ ಕಚೇರಿಗೆ ಆಧಾರ್ ಸಂಖ್ಯೆಯನ್ನು ಕೊಡುವುದನ್ನು ತಪ್ಪಿಸಲು ಇರುವ ಏಕೈಕ ‘ಸಕಾರಣ’ವೆಂದರೆ, ಆಧಾರ್ ಸಂಖ್ಯೆಯನ್ನು ಹೊಂದದೆ ಇರುವುದು. ಇಂಥ ಸಂದರ್ಭದಲ್ಲಿ ಮತದಾರರ ಗುರುತು ಚೀಟಿಯನ್ನು ಸಿಂಧುಗೊಳಿಸುವುದಕ್ಕಾಗಿ ಚಾಲನಾ ಪರವಾನಿಗೆ ಮತ್ತು ಪಾಸ್‌ಪೋರ್ಟ್ ಸೇರಿದಂತೆ ಇತರ 11 ಗುರುತು ಚೀಟಿಗಳನ್ನು ಸಲ್ಲಿಸಬಹುದಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಜುಲೈ 4ರಂದು ಸೂಚನೆಗಳನ್ನು ಕಳುಹಿಸಲಾಗಿದೆ. ಆಧಾರ್ ಸಲ್ಲಿಕೆ ಐಚ್ಛಿಕ ಎಂದು ಸೂಚನೆಗಳು ಹೇಳುತ್ತವೆ, ಆದರೆ ಅದನ್ನು ಸಲ್ಲಿಸದಿರಲು ಕೇವಲ ಒಂದು ಕಾರಣವನ್ನು ಮಾತ್ರಕೊಡಬಹುದಾಗಿದೆ: ಅದೆಂದರೆ ಆಧಾರ್ ಕಾರ್ಡ್ ಇಲ್ಲದಿರುವುದು.
‘‘ನಿಯಮಾವಳಿಗಳನ್ನು ಓದುವ ಯಾವುದೇ ಅಧಿಕಾರಿಯು, ಆಧಾರ್ ಮತ್ತು ಚುನಾವಣಾ ಗುರುತು ಚೀಟಿ ಜೋಡಣೆ ಕಡ್ಡಾಯ ಎಂಬ ನಿರ್ಧಾರಕ್ಕೆ ಬರುತ್ತಾರೆ’’ ಎಂದು ವಕೀಲೆ ಹಾಗೂ ಆಧಾರ್ ಮೇಲೆ ನಿಕಟ ನಿಗಾ ಇಟ್ಟಿರುವ ಸಂಘಟನೆ ‘ಆರ್ಟಿಕಲ್ 21’ರ ಟ್ರಸ್ಟಿ ಮಾನಸಿ ವರ್ಮಾ ಹೇಳುತ್ತಾರೆ.
ಅದೂ ಅಲ್ಲದೆ, ಆಧಾರ್ ಜೋಡಣೆಯನ್ನು ಪೂರ್ಣಗೊಳಿಸಲು 2023 ಎಪ್ರಿಲ್ 1ರ ಅಂತಿಮ ಗಡುವನ್ನು ವಿಧಿಸಲಾಗಿದೆ. ಆದರೆ, ಆಧಾರ್ ಕಾರ್ಡ್ ಅಥವಾ ಯಾವುದೇ ಇತರ ಗುರುತು ಚೀಟಿಯನ್ನು ಮತದಾರರ ಗುರುತು ಚೀಟಿಯೊಂದಿಗೆ ಜೋಡಿಸದಿದ್ದರೆ ಏನಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಯಾರಾದರೂ ಆಧಾರ್ ಸಂಖ್ಯೆಯನ್ನು ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಬಾರದು ಎಂಬ ಸೂಚನೆಯನ್ನು ಚುನಾವಣಾ ಅಧಿಕಾರಿಗಳಿಗೆ ನೀಡಲಾಗಿದೆ.
ಈ ಗೊಂದಲವು ಸರಕಾರಕ್ಕೆ ಪ್ರಯೋಜನಕಾರಿಯಾಗಿದೆ ಎಂದು ವರ್ಮಾ ಹೇಳುತ್ತಾರೆ. ‘‘ಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ಜನರು ಹೆಚ್ಚಾಗಿ ಈ ಎರಡು ದಾಖಲೆಗಳನ್ನು ಜೋಡಿಸುತ್ತಾರೆ’’ ಎಂದು ಅವರು ಹೇಳುತ್ತಾರೆ.
ಗುರಿ ಮತ್ತು ಗಡುವು
ನಮ್ಮ ಮೇಲಧಿಕಾರಿಗಳು ಏನು ಹೇಳಿದ್ದಾರೆಯೋ ಅದನ್ನು ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಬ್ಲಾಕ್ ಮಟ್ಟದ ಅಧಿಕಾರಿಗಳು ಹೇಳುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ನಿರ್ದಿಷ್ಟ ಗುರಿಗಳನ್ನು ನೀಡಲಾಗಿದೆ. ‘‘ಆಗಸ್ಟ್ ಕೊನೆಯ ವೇಳೆಗೆ ಎರಡು ದಾಖಲೆಗಳ ಜೋಡಣೆಯನ್ನು ಶೇ. 100 ಪೂರ್ಣಗೊಳಿಸಬೇಕು ಎಂಬ ಸೂಚನೆ ನಮಗೆ ಬಂದಿದೆ’’ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.
ಅಸ್ಸಾಮ್ ಚುನಾವಣಾ ಆಯೋಗವು ಆಗಸ್ಟ್ 19ರಂದು ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಹಾಕಿ, ಮತದಾರರ ಗುರುತು ಚೀಟಿ ಮತ್ತು ಆಧಾರ್ ಸಂಖ್ಯೆ ಜೋಡಣೆಯಲ್ಲಿ ಶೇ. 100 ಸಾಧನೆಗೈದ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರನ್ನು ಅಭಿನಂದಿಸಿದೆ. ಇದು ಈ ಪ್ರಕ್ರಿಯೆಗೆ ಉನ್ನತ ಅಧಿಕಾರಿಗಳು ನೀಡುತ್ತಿರುವ ಅತ್ಯಂತ ಹೆಚ್ಚಿನ ಆದ್ಯತೆಯನ್ನು ತೋರಿಸುತ್ತದೆ.
ಹಿರಿಯ ಅಧಿಕಾರಿಗಳು ಯಾವ ರೀತಿ ಒತ್ತಡವನ್ನು ಹೇರುತ್ತಿದ್ದಾರೆ ಎನ್ನುವುದನ್ನು ಇನ್ನೋರ್ವ ಅಧಿಕಾರಿ ವಿವರಿಸುತ್ತಾರೆ. ‘‘ಬೇರೆ ಬೇರೆ ಅಧಿಕಾರಿಗಳು ಮಾಡಿರುವ ಪ್ರಗತಿಯ ಬಗ್ಗೆ ಅವರು (ಹಿರಿಯ ಅಧಿಕಾರಿಗಳು) ದಿನದಲ್ಲಿ ಮೂರು ಬಾರಿ ಪಟ್ಟಿಗಳನ್ನು ಹಾಕುತ್ತಾರೆ’’ ಎಂದು ಅವರು ಹೇಳುತ್ತಾರೆ. ಯಾರಾದರೂ ಅಧಿಕಾರಿ ಸಕ್ರಿಯವಾಗಿ ಕೆಲಸ ಮಾಡದಿದ್ದರೆ, ಹಿರಿಯ ಅಧಿಕಾರಿಗಳು ಕಾರಣ ಕೇಳಿ ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ಅವರು ಹೇಳಿದರು.
‘‘ಕೆಲವು ಸಲ ನಾವು ಸುಳ್ಳು ಹೇಳಬೇಕಾಗುತ್ತದೆ. ನೀವು ಆಧಾರ್ ಜೋಡಣೆ ಮಾಡದಿದ್ದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಿ ಹಾಕಲಾಗುತ್ತದೆ ಎಂದು ನಾವು ಹೇಳುತ್ತೇವೆ’’ ಎಂದರು. ‘‘ಇದರಿಂದ ಕಳವಳಗೊಂಡು ಜನರು ತಮ್ಮ ಆಧಾರ್ ಸಂಖ್ಯೆಗಳನ್ನು ಕೊಡುತ್ತಾರೆ. ಒಂದು ವೇಳೆ ಅವರು ತಮ್ಮ ಆಧಾರ್ ಸಂಖ್ಯೆಗಳನ್ನು ಕೊಡದಿದ್ದರೆ ನಾವು ಬೇರೆ ಯಾವುದಾದರೂ ಗುರುತು ಚೀಟಿಯನ್ನು ಕೇಳುತ್ತೇವೆ’’ ಎಂದರು.
ಯಾವ ರೀತಿಯ ಪರಿಹಾರ?
ಆಧಾರ್ ಮತ್ತು ಮತದಾರರ ಗುರುತು ಚೀಟಿ ಜೋಡಣೆ ಬಗ್ಗೆ ಹಲವು ಆಧಾರ್ ಮತ್ತು ಡಿಜಿಟಲ್ ಹಕ್ಕುಗಳ ಹೋರಾಟಗಾರರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ, ಸಮಸ್ಯೆಯ ಗಾತ್ರದ ಬಗ್ಗೆ ಸ್ಪಷ್ಟನೆಯಿಲ್ಲ ಎಂದು ವರ್ಮ ಹೇಳುತ್ತಾರೆ. ‘‘ಮತದಾರರ ಪಟ್ಟಿಯಲ್ಲಿ ಎಷ್ಟು ನಕಲಿ ಹೆಸರುಗಳಿವೆ ಎನ್ನುವುದು ನಮಗೆ ಗೊತ್ತಿಲ್ಲ’’ ಎಂದು ಅವರು ಹೇಳುತ್ತಾರೆ.
ಅದೂ ಅಲ್ಲದೆ, ಮತದಾರರ ಗುರುತು ಚೀಟಿಗೆ ಆಧಾರ್ ಜೋಡಣೆಯು ಈ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ ಎನ್ನುವುದೂ ಗೊತ್ತಿಲ್ಲ. ‘‘ಆಧಾರ್ ಸಂಖ್ಯೆಯಲ್ಲೂ ನಕಲಿಗಳಿವೆ’’ ಎಂದು ಅವರು ಹೇಳಿದರು. ಮಹಾಲೆಕ್ಕಪರಿಶೋಧಕರ ಇತ್ತೀಚಿನ ವರದಿಯೊಂದರ ಪ್ರಕಾರ, 5 ಲಕ್ಷ ನಕಲಿ ಆಧಾರ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ‘‘ಹೀಗಿರುವಾಗ, ನಕಲಿ ಮತದಾರರ ಗುರುತು ಚೀಟಿಗಳನ್ನು ತೊಡೆದುಹಾಕುವಲ್ಲಿ ಆಧಾರ್ ಹೇಗೆ ಸಹಾಯ ಮಾಡುತ್ತದೆ’’ ಎಂದು ಅವರು ಪ್ರಶ್ನಿಸುತ್ತಾರೆ.
ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಬೆದರಿಕೆ
ದೇಶಾದ್ಯಂತದ ಮತದಾರರಿಗೆ ಚುನಾವಣಾ ಅಧಿಕಾರಿಗಳು ಕರೆ ಮಾಡಿ, ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡನ್ನು ಜೋಡಿಸದಿದ್ದರೆ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗುವುದು ಎಂಬುದಾಗಿ ಬೆದರಿಸುತ್ತಿದ್ದಾರೆ.
ಕೆಲವು ಪ್ರಕರಣಗಳಲ್ಲಿ, ಚುನಾವಣಾ ಅಧಿಕಾರಿಗಳು ಈಗಾಗಲೇ ಮತದಾರರ ಆಧಾರ್ ಸಂಖ್ಯೆಗಳನ್ನು ಹೊಂದಿದ್ದಾರೆ ಹಾಗೂ ಈಗ ಅವುಗಳನ್ನು ಮತದಾರರ ಗುರುತು ಚೀಟಿಗೆ ಜೋಡಿಸಲು ಅನುಮತಿಯನ್ನಷ್ಟೇ ಕೋರುತ್ತಿದ್ದಾರೆ. ‘‘ಅಧಿಕಾರಿಗಳಿಗೆ ಆಧಾರ್ ಸಂಖ್ಯೆ ಹೇಗೆ ಸಿಕ್ಕಿತು ಎಂದು ನಾನು ಕೇಳಿದಾಗ, ಮತದಾರರ ಗುರುತು ಚೀಟಿಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಹೆಚ್ಚಿನವರು ಆಧಾರ್ ಸಂಖ್ಯೆಗಳನ್ನೇ ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ’’ ಎಂದು ದಿಲ್ಲಿಯ ನಿವಾಸಿ ಸುದೀಪ್ತೊ ಘೋಷ್ ಹೇಳಿದರು. ಆದರೆ, ಘೋಷ್ ಮಾತ್ರ ತನ್ನ ಮತದಾರರ ಗುರುತು ಚೀಟಿಯನ್ನು ಆಧಾರ್ ಸಂಖ್ಯೆ ನೀಡಿ ಮಾಡಿಸಿಕೊಂಡಿಲ್ಲ. ಹಾಗಾಗಿ ಅವರು ಅಚ್ಚರಿಗೆ ಒಳಗಾಗಿದ್ದಾರೆ.
‘‘ನನ್ನ ಆಧಾರ್ ಸಂಖ್ಯೆಯನ್ನು ತೆಗೆದುಬಿಡಿ ಎಂದು ನಾನು ಅವರಿಗೆ ಹೇಳಿದ್ದೇನೆ’’ ಎಂದು ಘೋಷ್ ಹೇಳಿದರು. ತನ್ನ ಸೂಚನೆಯನ್ನು ಅಧಿಕಾರಿಗಳು ಪಾಲಿಸಿದ್ದಾರೆಯೇ ಎನ್ನುವುದು ಅವರಿಗೆ ತಿಳಿದಿಲ್ಲ.
ಕೃಪೆ:Scroll.in







