ಹೆದ್ದಾರಿ ಸಮೀಪ ಚೀಲದಲ್ಲಿ ಪತ್ತೆಯಾದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹ: ಪೊಲೀಸರ ಮಾಹಿತಿ

Photo:PTI
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಶುಕ್ರವಾರ ಹೆದ್ದಾರಿ ಬದಿಯಲ್ಲಿ 15 ವರ್ಷದ ಬಾಲಕಿಯ ಶವ ಚೀಲದೊಳಗೆ(Minor Girl's Body Found Stuffed In Bag ) ಪತ್ತೆಯಾಗಿದೆ.
ಮುಂಬೈ-ಅಹಮದಾಬಾದ್ ಹೆದ್ದಾರಿಯ ಬದಿಯಲ್ಲಿರುವ ನೈಗಾಂವ್ ಸೇತುವೆಯ ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾರಿಹೋಕರೊಬ್ಬರು ಬ್ಯಾಗ್ ಅನ್ನು ಗಮನಿಸಿ ವಾಲಿವ್ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿತು ಎಂದು ಅವರು ಹೇಳಿದರು.
ದೇಹಕ್ಕೆ ಹಲವು ಚೂರಿ ಇರಿತ ಆಗಿರುವುದು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ವಸಾಯಿನಲ್ಲಿರುವ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
"ಸಂತ್ರಸ್ತೆ ಮುಂಬೈನ ಅಂಧೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅಂಧೇರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿ ಶಾಲೆಗೆ ಹೋಗಲೆಂದು ಮನೆಯಿಂದ ಹೋಗಿದ್ದಳು, ಆದರೆ ಸಂಜೆಯವರೆಗೂ ಮನೆಗೆ ಬಾರದೆ ಇದ್ದಾಗ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು ಎಂದು ಬಾಲಕಿಯ ಕುಟುಂಬಸ್ಥರು ಹೇಳಿದ್ದರು. ಇಂದು ಮಧ್ಯಾಹ್ನ ಬಾಲಕಿಯ ಶವ ಒಂದು ಬ್ಯಾಗ್ ನಲ್ಲಿ ಪತ್ತೆಯಾಗಿದೆ. ವಲೀವ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.







