ಕಾಮೆಡಿಯನ್ ಮುನವ್ವರ್ ಫಾರೂಕಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ದಿಲ್ಲಿ ಪೊಲೀಸ್

ಹೊಸದಿಲ್ಲಿ: ಆಗಸ್ಟ್ 28 ರಂದು ನಗರದಲ್ಲಿ ನಡೆಯಬೇಕಿದ್ದ ಕಾಮೆಡಿಯನ್ ಮುನವ್ವರ್ ಫಾರೂಕಿ(Munawar Faruqui) ಅವರ ಕಾರ್ಯಕ್ರಮಕ್ಕೆ ದಿಲ್ಲಿ ಪೊಲೀಸರು ಶುಕ್ರವಾರ ಅನುಮತಿ ನಿರಾಕರಿಸಿದ್ದಾರೆ ಎಂದು Theindianexpress.com ವರದಿ ಮಾಡಿದೆ.
ಪ್ರದರ್ಶನಕ್ಕೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್(Vishwa Hindu Parishad) ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೊಲೀಸರು ಕಾರ್ಯಕ್ರಮವನ್ನು ರದ್ದುಪಡಿಸಲು ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಬಜರಂಗದಳದೊಂದಿಗೆ ವಿಹಿಂಪ ಎಚ್ಚರಿಕೆ ನೀಡಿತ್ತು.
ಆಗಸ್ಟ್ 23 ರಂದು, ಕೇದಾರನಾಥ ಸಾಹ್ನಿ ಆಡಿಟೋರಿಯಂನ ಡಾ. ಎಸ್‌ಪಿಎಂ ಸಿವಿಕ್ ಸೆಂಟರ್‌ನಲ್ಲಿ ಕಾರ್ಯಕ್ರಮಕ್ಕೆ ಪೊಲೀಸ್ ಪರವಾನಗಿ ವಿಭಾಗವು ಅನುಮತಿ ನೀಡಿತ್ತು. ಆದಾಗ್ಯೂ, ಅಧಿಕಾರಿಗಳು ಸ್ಥಳೀಯ ಜಿಲ್ಲಾ ಪೊಲೀಸರಿಂದ ವರದಿಯನ್ನು ಸ್ವೀಕರಿಸಿದ ನಂತರ ಅನುಮತಿಯನ್ನು ತಿರಸ್ಕರಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಪರವಾನಗಿ ವಿಭಾಗ) ಒಪಿ ಮಿಶ್ರಾ ಹೇಳಿದ್ದಾರೆ.
"ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿ ಪರವಾನಗಿ ಶಾಖೆಗೆ ತಮ್ಮ ವರದಿಯನ್ನು ಸಲ್ಲಿಸಿದರು, ಅದರಲ್ಲಿ ಈ ಕಾರ್ಯಕ್ರಮವು ಪ್ರದೇಶದಲ್ಲಿ ಕೋಮು ಸೌಹಾರ್ದತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅನುಮತಿಯನ್ನು ರದ್ದುಗೊಳಿಸಬೇಕು ಎಂದು ತಿಳಿಸಿದರು" ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಗುರುವಾರ, ವಿಶ್ವ ಹಿಂದೂ ಪರಿಷತ್ತಿನ ದಿಲ್ಲಿ ಅಧ್ಯಕ್ಷ ಸುರೇಂದ್ರ ಕುಮಾರ್ ಗುಪ್ತಾ(Surendra Kumar Gupta) ಅವರು ಪೊಲೀಸರಿಗೆ ಬರೆದ ಪತ್ರದಲ್ಲಿ ಫಾರೂಕಿ ತಮ್ಮ ಪ್ರದರ್ಶನದಲ್ಲಿ "ಹಿಂದೂ ದೇವರು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುತ್ತಾರೆ" ಎಂದು ಹೇಳಿದ್ದಾರೆ. "ಇದರ ಪರಿಣಾಮವಾಗಿ, ಭಾಗ್ಯನಗರದಲ್ಲಿ [ಹೈದರಾಬಾದ್] ಕೋಮು ಉದ್ವಿಗ್ನತೆ ಉಂಟಾಗಿದೆ" ಎಂದು ಅವರು ಹೇಳಿದ್ದರು.







