ರಾಯಚೂರಿನ ಒಂದಿಂಚೂ ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ರಾಯಚೂರು: 'ತೆಲಂಗಾಣ ಮುಖ್ಯಮಂತ್ರಿಗಳು ರಾಯಚೂರಿನ ಕೆಲವು ಭಾಗಗಳನ್ನು ತೆಲಂಗಾಣಕ್ಕೆ ಸೇರಿಸಬೇಕೆಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ರಾಯಚೂರಿನ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
'ರಾಯಚೂರಿಗೆ ಈ ವರ್ಷ ಕೆ.ಕೆ.ಆರ್.ಡಿ.ಬಿಯಲ್ಲಿ ಅಡಿ ಅತಿ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ತೆಲಂಗಾಣದ ಸಮಸ್ಯೆಗಳ ಬಗ್ಗೆ ದಿಕ್ಕು ತಪ್ಪಿಸಲು ಈ ರೀತಿ ಹೇಳಿದ್ದಾರೆ. ತೆಲಂಗಾಣವೇ ಹಿಂದುಳಿದ ಪ್ರದೇಶ ಎಂದು ಅವರು ಹೋರಾಟ ಮಾಡಿ ಪ್ರತ್ಯೇಕ ರಾಜ್ಯ ಮಾಡಿದ್ದಾರೆ. ಅದನ್ನು ಸುಧಾರಣೆ ಮಾಡುವತ್ತ ಅವರು ಕೆಲಸ ಮಾಡಬೇಕಿದೆ. ರಾಯಚೂರಿನ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. ಒಂದಿಂಚು ಕೂಡ ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ' ಎಂದರು.
ಚಾಮರಾಜಪೇಟೆ ಈದ್ಗಾ ವಿವಾದದ ಬಗ್ಗೆ ಮಾತನಾಡಿ 'ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ನಂತರ ಮುಂದಿನ ತೀರ್ಮಾನಗಳನ್ನು ಮಾಡಲಾಗುವುದು' ಎಂದರು.





