ಶಿಕ್ಷಣದ ಅಧ:ಪತನದ ಕ್ಷಣಗಳು ಗೋಚರ: ಪ್ರೊ. ವಿವೇಕ ರೈ
‘ಗೆಲುವಿನ ದು:ಖ ಸೋಲಿನ ಸುಖ’ ಕೃತಿ ಬಿಡುಗಡೆ

ಮಂಗಳೂರು, ಆ. 27: ಶಿಕ್ಷಣದ ಅಧ:ಪತನದ ಕ್ಷಣಗಳು ನಿಧಾನಕ್ಕೆ ಗೋಚರವಾಗುತ್ತಿದ್ದು, ಭ್ರಷ್ಟತೆ ಮತ್ತು ಪ್ರಚಾರ ಪ್ರಿಯತೆ ಹೆಚ್ಚುತ್ತಿದೆ. ಕಳೆದ 15 ವರ್ಷಗಳಿಂದೀಚೆಗೆ ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ತುಳು ಕನ್ನಡ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಅಭಿಪ್ರಾಯಿಸಿದ್ದಾರೆ.
ಅನೇಕಾಂತ ಪ್ರತಿಷ್ಠಾನ, ಆಕೃತಿ ಆಶಯ ಪಬ್ಲಿಕೇಶನ್ ಆಶ್ರಯದಲ್ಲಿ ಡಾ. ಉದಯ ಕುಮಾರ್ ಇರ್ವತ್ತೂರು ಅವರ ‘ಗೆಲುವಿನ ದು:ಖ ಸೋಲಿನ ಸುಖ’ ಕೃತಿಯನ್ನು ನಗರದ ಸಹೋದಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎಡ, ಬಲ ಎಂಬ ಚಿಂತನೆಗಳ ನಡುವೆ ಶಿಕ್ಷಣ ಸಂಸ್ಥೆಗಳು, ಅದನ್ನು ಮುನ್ನಡೆಸುವ ಮುಖ್ಯಸ್ಥರು ಕೂಡಾ ಇಕ್ಕಟ್ಟಿನ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ವ್ಯವಸ್ಥೆಯ ನಡುವೆಯೂ ನಾವು ಯಾರ ಕಡೆಯೂ ವಾಲಬೇಕಾಗಿಲ್ಲ. ನೈತಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಬರಿಯ ಕಟ್ಟಡಗಳಾಗಿರದೆ ಅವುಗಳು ವಿದ್ಯಾರ್ಥಿ ಕೇಂದ್ರೀಕೃತವಾಗಿರಬೇಕು. ಒಳ್ಳೆಯ ಅಧ್ಯಾಪಕ ಮಾತ್ರ ಉತ್ತಮ ಶಿಕ್ಷಣ ಸಂಸ್ತೆ ಕಟ್ಟಲು ಸಾದ್ಯ. ಶಿಕ್ಷಣ ಸಂಸ್ಥೆ ಎಂಬುದು ಕಾನೂನು ಕಟ್ಟಲೆಗಳಿಗೆ ಒಳಪಡದೆ ಬದುಕು ಕಟ್ಟುವ ಕ್ರಿಯೆಯಾಗಿರಬೇಕು. ಅಲ್ಲಿ ಕೇವಲ ಭೌತಿಕ ಅನುಕೂಲಗಳಿದ್ದರೆ ಸಾಲದು ಅಲ್ಲಿ ಬೌದ್ಧಿಕತೆ ಬೆಳೆಸಬೇಕು ಎಂದು ಪ್ರೊ. ವಿವೇಕ ರೈ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯಸ್ಥರಾಗಿ ಸಂಸ್ಥೆಗಳನ್ನು ಮ್ಯಾನೇಜ್ ಮಾಡುವುದು ಮಾತ್ರವಲ್ಲ. ಅದನ್ನು ಕಟ್ಟುವುದು ಬಹು ಮುಖ್ಯ. ಅಲ್ಲಿ ಉದ್ಬವಿಸುವ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಡಾ. ಉದಯ ಕುಮಾರ್ ಅವರು ಅಂತಹ ಕೆಲಸವನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾತಂತ್ರ್ಯದ ಬಳಿಕದ 75 ವರ್ಷಗಳನ್ನು ನೋಡಿದ ನಮ್ಮಂತಹ ಹಲವರಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಲವರು ಆಡುವ ಮಾತುಗಳು ಹಾಸ್ಯಾಸ್ಪದ ಅನ್ನಿಸುತ್ತಿದೆ. ಅಂದಿನ ಮತ್ತು ಇಂದಿನ ಆಶಯಗಳಲ್ಲಿ ಅಜಗತಾಂತರವಾಗಿದೆ.
ಕೃತಿ ಪರಿಚಯ ನೀಡಿದ ಡಾ. ನರೇಂದ್ರ ರೈ ದೇರ್ಲ, ಡಾ. ಉದಯ ಕುಮಾರ್ ಅವರು ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ತನಾಗಿ ಅನುಭವಿಸಿದ ನೋವು, ಹತಾಶೆ, ಭಯ, ಸಂತಸಗಳ ಸಮ್ಮಿಲನವೇ ‘ಗೆಲುವಿನ ದು:ಖ ಸೋಲಿನ ಸುಖ’ ಕೃತಿ. ಪುಸ್ತಕ ಓದಿ ಹಗುರವಾಗಿದ್ದೇನೆ. ಪುಸ್ತಕದ ಹೆಚ್ಚುಗಾರಿಕೆ ವೇದನೆ ತುಂಬಾ ಇದ್ದರೂ, ಅದಕ್ಕಿಂತ ಹೆಚ್ಚಾಗಿ ನಿವೇದನೆ ಇದೆ. ತಮ್ಮ ಐದಾರು ವರ್ಷಗಳ ಕಾಲೇಜಿನ ಒಳಗಡೆ ತಾನು ಅನುಭವಿಸಿದ ವೇದನೆಯನ್ನು ಅವರು ಪದರ ಪದರವಾಗಿ ತೆರೆದಿಟ್ಟಿದ್ದಾರೆ ಎಂದರು.
ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಪ್ರಕಾಶಕ ಕಲ್ಲೂರು ನಾಗೇಶ ಉಪಸ್ಥಿತರಿದ್ದರು. ವಿಶ್ರಾಂತ ಪ್ರಾಂಶುಪಾಲ ಕೆ. ಗುಣಪಾಲ ಕಡಂಬ ಅಧ್ಯಕ್ಷತೆ ವಹಿಸಿದ್ದರು.
ಕೃತಿಕಾರ ಡಾ. ಉದಯ ಕುಮಾರ್ ಇರ್ವತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.









