ಉಡುಪಿಯ ಮೂಡುಸಗ್ರಿ ವಾರ್ಡಿನವರಿಗೆ 3 ದಿನಗಳಿಂದ ಕುಡಿಯಲು ನೀರಿಲ್ಲ: ದೂರು

ಉಡುಪಿ, ಆ.27: ಹೊರಗೆ ದಿನವಿಡೀ ಧಾರಾಕಾರ ಮಳೆ ಸುರಿದು ರಸ್ತೆಯಲ್ಲೆಲ್ಲಾ ನೀರು ನಿಂತಿರಬಹುದು. ಆದರೆ ಉಡುಪಿ ಮೂಡುಸಗ್ರಿ ವಾರ್ಡಿನ ದೊಡ್ಡಣಗುಡ್ಡೆ ಆದಿಶಕ್ತಿ ದೇವಸ್ಥಾನದ ಆಸುಪಾಸಿನ ಮನೆಯವರಿಗೆ ಕಳೆದ ಮೂರು ದಿನಗಳಿಂದ ಕುಡಿಯಲು ಸಹ ನೀರು ಬರುತ್ತಿಲ್ಲ ಎಂದು ವಾರ್ಡಿನ ಜನರು ದೂರುತಿದ್ದಾರೆ.
ಇಲ್ಲಿನ ಹಲವಾರು ಮನೆಗಳಿಗೆ ಕಳೆದ ವಾರ ಮೂರು ದಿನ ನೀರು ಬಂದಿರಲಿಲ್ಲ. ಸಂತ್ರಸ್ಥ ಜನರು ಕೌನ್ಸಿಲರ್‌ರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿದಾಗ, ಕೆಲವು ತಾಂತ್ರಿಕ ಕಾರಣಗಳಿಂದ ನೀರು ಸರಬರಾಜಿನಲ್ಲಿ ತೊಂದರೆಯಾಗಿದೆ. ಕೂಡಲೇ ಸರಿಮಾಡಿಸುತ್ತೇನೆ ಎಂದು ಉತ್ತರಿಸಿದ್ದರು.
ಸೋಮವಾರದ ಬಳಿಕ ಗುರುವಾರದವರೆಗೆ ನೀರು ಸರಿಯಾಗಿ ಬಂತು. ಆದರೆ ಗುರುವಾರ ಬೆಳಗ್ಗೆ ಬಂದ್ ಆದ ನೀರು ಇಂದು ಸಂಜೆಯವರೆಗೆ ಬಂದಿಲ್ಲ. ಹತ್ತಾರು ಮನೆಗಳ ಜನರು ತೀವ್ರ ತೊಂದರೆಗೆ ಸಿಲುಕಿದ್ದೇವೆ. ಕೌನ್ಸಿಲರ್ ಬಳಿ ಕೇಳಿದರೆ ಹಾರಿಕೆ ಉತ್ತರ ನೀಡುತಿದ್ದಾರೆ. ಇಂಜಿನಿಯರ್ ಬಳಿ ದೂರಿದರೆ, ಸರಿಪಡಿಸುತ್ತೇವೆ ಎಂದವರು ಮತ್ತೆ ದೂರವಾಣಿಯನ್ನೇ ಎತ್ತುತ್ತಿಲ್ಲ ಎಂದು ವಾರ್ಡಿನ ಅಶೋಕ್ ಗುಂಡಿಬೈಲು ದೂರಿದ್ದಾರೆ.
ಬಿರುಸಿನ ಮಳೆಗಾಲದಲ್ಲೂ ನಮ್ಮ ವಾರ್ಡಿನ ಜನರಿಗೆ ಕುಡಿಯಲು ಸಹ ತೊಟ್ಟು ನೀರು ಸಿಗುತ್ತಿಲ್ಲ. ಅಗತ್ಯದ ನೀರಿಗಾಗಿ ನಾವು ಯಾರ್ಯಾರದೊ ಮುಂದೆ ಅಂಗಲಾಚಬೇಕಾಗಿದೆ. ನಾವೇ ಆಯ್ಕೆ ಮಾಡಿದ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ ಎಂದವರು ದೂರಿದರು.







