ಚರ್ಮ, ಅಂಗಾಂಗ ದಾನದ ಅರಿವಿಗಾಗಿ ಜನಜಾಗೃತಿ: ಡಾ. ಜಯಗೌರಿ

ಉಡುಪಿ : ಭಾರತದಲ್ಲಿ ಲಕ್ಷಾಂತರ ಮಂದಿಗೆ ಚರ್ಮ, ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಕಾಂಗ ಸಹಿತ ಬಹುಮುಖ್ಯ ಅಂಗಾಂಗಗಳ ತುರ್ತು ಅಗತ್ಯವಿದ್ದು, ಶೇ.೦.೦೧ರಷ್ಟು ಮಂದಿಯಷ್ಟೇ ಅಂಗಾಂಗ ಮಾಡುತ್ತಿದ್ದಾರೆ. ಅಂಗಾಂಗ ಕೊರತೆ ನಿಗಿಸುವ ನಿಟ್ಟಿನಲ್ಲಿ ಅಂಗಾಂಗ ದಾನದ ಬಗ್ಗೆ ತಿಳುವಳಿಕೆ ಮೂಡಿಸುವುದಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಗವರ್ನರ್ ಡಾ.ಜಯಗೌರಿ ಹಡಿಗಾಲ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ರೋಟರಿ ಕ್ಲಬ್‌ಗಳು ಕನಿಷ್ಠ ತಲಾ ಇಬ್ಬರು ಬಡ ಫಲಾನುಭವಿ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ. ಈ ಬಾರಿಯ ಜತೆಗೆ ಜಲ ಯಾತ್ರೆ, ಇ-ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪ್ರತಿಯೊಂದು ಕ್ಷಬ್, ಶಿಕ್ಷಕರಿಗೆ ಮತ್ತು ಪೋಷಕರಿಗೆ ಆಯಾ ಶಾಲೆಗಳಲ್ಲಿ ಕಾರ್ಯಾಗಾರವನ್ನು ಏರ್ಪಡಿಸಿ ಹಾಗು ಹತ್ತಿರದ ಶಾಲೆಗಳ ಎಲ್ಲಾ ಶಿಕ್ಷಕರನ್ನು ಮತ್ತು ಕಲಿಕಾ ನ್ಯೂನತೆಯುಳ್ಳ ಮಕ್ಕಳ ಪೋಷಕರನ್ನು ಒಂದು ಕಡೆ ಸೇರಿಸಿ ದೊಡ್ಡ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು. ಉಡುಪಿ ಜಿಲ್ಲೆಯಲ್ಲಿ ೫೦ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಶಾಂತ್ ಹೆಗ್ಡೆ, ಅಮಿತ್ ಅರವಿಂದ್, ರಾಜಾವರ್ಮ ಅಡಿಗ, ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಯ, ಡಾ ಎಚ್.ಎಸ್. ಶುಭಾ, ಡಾ.ಶೇಷಪ್ಪ ರೈ ಉಪಸ್ಥಿತರಿದ್ದರು.
ಮಣಿಪಾಲದಲ್ಲಿ ಸ್ಕಿನ್ ಬ್ಯಾಂಕ್
ಬೆಂಗಳೂರು, ಬೆಳಗಾಂ ಹಾಗೂ ಮಣಿಪಾಲದಲ್ಲಿ ಸ್ಕೀನ್ ಬ್ಯಾಂಕ್‌ಗಳಿದ್ದು, ಮಣಿಪಾಲ ಬ್ಯಾಂಕಿಗೆ ೧೯ ಮಂದಿ ಚರ್ಮದಾನ ಮಾಡಿದ್ದಾರೆ. 500ಕ್ಕೂ ಅಧಿಕ ಮಂದಿ ಚರ್ಮದಾನ ಮಾಡುವ ಬಗ್ಗೆ ನೋಂದಣಿ ಮಾಡಿಕೊಂಡಿದ್ದಾರೆ. ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ ೮ ಜೀವಗಳನ್ನು ಉಳಿಸಬಹುದಾಗಿದೆ ಎಂದು ಡಾ.ಶೇಷಪ್ಪ ರೈ ತಿಳಿಸಿದರು.
ಸುಮಾರು 200 ಕಿ.ಮೀ. ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಮೃತರಾದ ೬ ಗಂಟೆಯೊಳಗೆ ಆಸ್ಪತ್ರೆಗೆ ಮಾಹಿತಿ ಕೊಟ್ಟರೆ ವೈದ್ಯರ ತಂಡವೇ ಮನೆಗೆ ಬಂದು ೩೫ ರಿಂದ ೪೦ ನಿಮಿಷದೊಳಗೆ ೦.೩ ಎಂ.ಎಂ. ಚರ್ಮವನ್ನು ತೆಗೆಯಲಾಗುವುದು. ಇದರಿಂದ ಅಂತ್ಯಕ್ರಿಯೆಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ೧೮ ವರ್ಷದಿಂದ ೧೦೦ ವರ್ಷದೊಳಗಿನ ಎಚ್‌ಐವಿ, ಚರ್ಮ ಕ್ಯಾನ್ಸರ್ ಸಹಿತ ಕೆಲವೊಂದು ಖಾಯಿಲೆ ಹೊರತು ಪಡಿಸಿ ಉಳಿದವರು ಚರ್ಮ ದಾನ ಮಾಡಬಹುದು. ಮೃತದೇಹ ಶವಗಾರದಲ್ಲಿದ್ದರೆ ೧೨ ಗಂಟೆಯ ಅವಧಿಯಲ್ಲಿ ಚರ್ಮದಾನ ಮಾಡಬಹುದು. ಈ ಚರ್ಮವನ್ನು ೩ ರಿಂದ ೫ ವರ್ಷಗಳ ಕಾಲ ಇಡಬಹುದು. ಕಾಲು, ತೊಡೆ ಹಾಗೂ ಹಿಂಭಾಗದಲ್ಲಿ ವೈದ್ಯರು ಚರ್ಮ ತೆಗೆಯುತ್ತಾರೆ ಎಂದರು.