ಇಥಿಯೋಪಿಯಾ: ವಾಯುದಾಳಿಯಲ್ಲಿ ಕನಿಷ್ಟ ೭ ಮಂದಿ ಮೃತ್ಯು
ನೈರೋಬಿ, ಆ.27: ಇಥಿಯೋಪಿಯಾದಲ್ಲಿ ಕದನ ವಿರಾಮ ಜಾರಿಗೊಂಡ ೪ ತಿಂಗಳ ಬಳಿಕ ನಾರ್ದರ್ನ್ ಟಿಗ್ರೆ ವಲಯದಲ್ಲಿ ಶುಕ್ರವಾರ ನಡೆದ ವಾಯುದಾಳಿಯಲ್ಲಿ 3 ಮಕ್ಕಳ ಸಹಿತ ಕನಿಷ್ಟ 7 ಮಂದಿ ಮೃತಪಟ್ಟಿದ್ದು 9 ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇಥಿಯೋಪಿಯಾದಲ್ಲಿ 4 ತಿಂಗಳಿAದ ಕದನ ವಿರಾಮ ಜಾರಿಯಲ್ಲಿತ್ತು. ಆದರೆ ಈ ವಾರ ಟಿಗ್ರೆ ಮತ್ತು ಅಮ್ಹಾರಾ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಕಾರದ ಪಡೆ ಮತ್ತು ಟಿಗ್ರೆ ಪಡೆಯ ನಡುವೆ ಘರ್ಷಣೆ ಭುಗಿಲೆದ್ದ ಬಳಿಕ ಕದನ ವಿರಾಮ ಮುರಿದುಬಿದ್ದಿದೆ. ವಾಯುದಾಳಿಗೆ ಫೆಡರಲ್ ಸರಕಾರವೇ ಹೊಣೆಯಾಗಿದ್ದು ಮಕ್ಕಳು ಆಡುವ ಮೈದಾನಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ಟಿಗ್ರಾಯ್ ಟೆಲಿವಿಷನ್ ದೂಷಿಸಿದೆ. ಮಿಲಿಟರಿ ವ್ಯವಸ್ಥೆಗಳಿಂದ ದೂರ ಇರುವಂತೆ ಇಥಿಯೋಪಿಯಾ ಸರಕಾರ ಟಿಗ್ರೆ ನಿವಾಸಿಗಳನ್ನು ಆಗ್ರಹಿಸಿದೆ. ವಾಯುದಾಳಿಯಲ್ಲಿ ನಾಗರಿಕರ ಸಾವುನೋವು ಸುಳ್ಳುಸುದ್ಧಿ ಮತ್ತು ಕಟ್ಟುಕಥೆಯಾಗಿದೆ. ಸರಕಾರವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ, ಕೇವಲ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಫೆಡರಲ್ ಸರಕಾರದ ವಕ್ತಾರರು ಹೇಳಿದ್ದಾರೆ.