ಆತ್ಮವಿಶ್ವಾಸವಿರುವ ಕಲಾಕಾರ ಅಬ್ಬರದ ಧ್ವನಿ ಬಳಸುವುದಿಲ್ಲ: ಗಿರೀಶ್ ಕಾಸರವಳ್ಳಿ

ಬೆಂಗಳೂರು, ಆ.27: ಯಾವ ಕಲಾಕಾರನಿಗೆ ತನ್ನ ಕಲೆಯ ಬಗ್ಗೆ ಆತ್ಮವಿಶ್ವಾಸ ಇರುತ್ತದೆಯೋ, ಆ ಕಲಾಕಾರ ಅಬ್ಬರದ ಧ್ವನಿಯನ್ನು ಬಳಸುವುದಿಲ್ಲ. ಸಂಯಮದ ಧ್ವನಿಯನ್ನು ಬಳಸುತ್ತಾನೆ. ಆ ಮೂಲಕ ವಾದಕ್ಕೆ ಅಲ್ಲದೇ ಸಂವಾದಕ್ಕೆ ನಾಂದಿಯಾಗುತ್ತಾನೆ. ಆ ಸಂವಾದ ಇಂದಿನ ಅಗತ್ಯವಾಗಿದ್ದು, ಎಂ.ಎಸ್. ಮೂರ್ತಿ ತಮ್ಮ ಕಾದಂಬರಿ ಮೂಲಕ ಅಂತಹ ಸಂವಾದಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ಕಿರಂ ಪ್ರಕಾಶನ ಶನಿವಾರ ಬಸವನಗುಡಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಆಯೋಜಿಸಿದ್ದ `ಬೌಲ್’ ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಾಕಾರರು ಅಬ್ಬರದ ಧ್ವನಿಯಲ್ಲಿ ಹೇಳಿದರೆ, ಓದುಗ, ಕೇಳುಗ ಹಾಗೂ ನೋಡುಗನು ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ. ಓದುಗನು ಕಲಾಕಾರ ಹೇಳುತ್ತಿರುವುದೇ ಸರಿ ಎಂದು ವಿವೇಚನೆ ಮಾಡದೆ ನಿರ್ಧಾರಕ್ಕೆ ಬರುತ್ತಾನೆ. ಆದರೆ ಎಂ.ಎಸ್. ಮೂರ್ತಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಬೌಲ್ ಕೃತಿ ಬೌದ್ಧರ ಭಿಕ್ಷಾ ಪಾತ್ರೆಯನ್ನು ನೆನಪಿಗೆ ತಂದರೂ, ಈ ಕೃತಿ ಅಷ್ಟಕ್ಕೇ ಸೀಮಿತವಾಗದೆ ಹೊಸ ಸಂವಾದವನ್ನು ಹುಟ್ಟುಹಾಕುತ್ತದೆ. ಮೂರ್ತಿ ಅವರು ಈಗಾಗಲೇ ಕಲಾವಿದರಾಗಿ ಹೆಸರುವಾಸಿಯಾದವರು. ಕಲಾಕೃತಿಗಳ ಮೂಲಕ ನೋಡುಗರನ್ನು ಭಿನ್ನ ಆಲೋಚನೆಯತ್ತ ಸೆಳೆದವರು. ಅದೇ ರೀತಿಯಲ್ಲಿ ಇದೀಗ ಬೌಲ್ ಕೃತಿಯಲ್ಲೂ ಕೂಡ ಹೊಸತನದ ಹುಡುಕಾಟ ನಡೆಸಿದ್ದಾರೆ ಎಂದು ತಿಳಿಸಿದರು.
ವಿಮರ್ಶಕ ಪ್ರೊ. ಒ.ಎಲ್. ನಾಗಭೂಷಣಸ್ವಾಮಿ ಮಾತನಾಡಿ, ಮೂರ್ತಿ ಅವರ ಪುಸ್ತಕ ಬದಲಾವಣೆಯನ್ನು ಬಯಸುತ್ತದೆ. ಬೌಲ್ ಕೃತಿಯನ್ನು ಓದುಗರು ಓದಿ ಕಲ್ಪಿಸಿಕೊಳ್ಳಬೇಕು. ಬೇರೆಯವರ ಮಾತು ಅದಕ್ಕೆ ಅಡ್ಡಿ ಆಗಬಾರದು. ಬೌಲ್ ಎಂಬುದು ರೂಪಕ, ಖಾಲಿಯಾಗುವುದನ್ನು ಕಲಿಸುವ, ಮನಕ್ಕಿಳಿಸುವ ರೂಪಕ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕರಾದ ಎಚ್.ಎಸ್.ರಾಘವೇಂದ್ರರಾವ್, ಮನು ಚಕ್ರವರ್ತಿ, ಕೃಷ್ಣ ಮಾಸಡಿ, ಕಿರಂ ಪ್ರಕಾಶನದ ಜಿ.ವಿ.ಧನಂಜಯ, ವೆಂಕಟೇಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ>>> 'ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ?': ಸಾವರ್ಕರ್ ಪಠ್ಯದ ಕುರಿತು ಮತ್ತೊಂದು ವಿವಾದ ಸೃಷ್ಟಿ







