ಅತ್ಯಂತ ರಹಸ್ಯ ದಾಖಲೆಗಳನ್ನು ಟ್ರಂಪ್ ಪತ್ರಿಕೆಗಳ ಜತೆ ಬೆರೆಸಿಟ್ಟಿದ್ದರು: ಎಫ್ಬಿಐ

photo :today india
ವಾಷಿಂಗ್ಟನ್, ಆ.27: ಈ ವರ್ಷದ ಆರಂಭದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾ ಎಸ್ಟೇಟ್ ನಲ್ಲಿ ವಶಕ್ಕೆ ಪಡೆಯಲಾದ 15 ಪೆಟ್ಟಿಗೆಗಳಲ್ಲಿ 14ರಲ್ಲಿ ವರ್ಗೀಕೃತ ದಾಖಲೆಗಳಿದ್ದವು, ಇದರಲ್ಲಿ ಹಲವು ಅತ್ಯಂತ ರಹಸ್ಯ ಸರಕಾರಿ ದಾಖಲೆಗಳು. ಇವನ್ನು ಟ್ರಂಪ್ ವಿವಿಧ ದಿನಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ವೈಯಕ್ತಿಕ ಪತ್ರವ್ಯವಹಾರದ ಜತೆ ಬೆರೆಸಿಟ್ಟಿದ್ದರು ಎಂದು ಎಫ್ಬಿಐ ಶುಕ್ರವಾರ ಬಿಡುಗಡೆಗೊಳಿಸಿರುವ ಅಫಿದಾವಿತ್ನಲ್ಲಿ ಉಲ್ಲೇಖಿಸಲಾಗಿದೆ.
ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ ನ ಯಾವುದೇ ಭಾಗದಲ್ಲಿ ಸರಕಾರದ ಅತ್ಯಂತ ರಹಸ್ಯದಾಖಲೆ, ವರ್ಗೀಕೃತ ದಾಖಲೆಗಳನ್ನು ಸಂಗ್ರಹಿಸಿಡಲು ಅಧಿಕಾರ ನೀಡಿರಲಿಲ್ಲ. ಟ್ರಂಪ್ ಶ್ವೇತಭವನದಿಂದ ನಿರ್ಗಮಿಸಿದ ಕೆಲ ಸಮಯದವರೆಗೂ ಇವನ್ನು ಅವರ ನಿವಾಸದಲ್ಲಿ ಅಕ್ರಮವಾಗಿ ಇಡಲಾಗಿತ್ತು ಎಂದು 32 ಪುಟಗಳ ಅಫಿದಾವಿತ್ನಲ್ಲಿ ಉಲ್ಲೇಖಿಸಲಾಗಿದೆ.
ಉನ್ನತ ರಹಸ್ಯ ಸರಕಾರಿ ದಾಖಲೆಗಳನ್ನು ನಿರ್ಲಕ್ಷ್ಯದಿಂದ ಅವ್ಯವಸ್ಥಿತವಾಗಿ ಇಟ್ಟಿರುವುದು ಮತ್ತು ಅಮೆರಿಕದ ಅಧಿಕಾರಿಗಳಿಂದ ತಿಂಗಳುಗಳ ಕಾಲದ ಮನವಿಯ ಹೊರತಾಗಿಯೂ ಅವನ್ನು ರಕ್ಷಿಸುವಲ್ಲಿ ವೈಫಲ್ಯವು 2024ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅಡಿಪಾಯ ರೂಪಿಸುತ್ತಿರುವ ಟ್ರಂಪ್ ಅವರನ್ನು ಹೊಸ ಕಾನೂನು ಗಂಡಾಂತರಕ್ಕೆ ಒಡ್ಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅನಧಿಕೃತ ಸ್ಥಳಗಳಲ್ಲಿ ವರ್ಗೀಕೃತ ಮಾಹಿತಿಯನ್ನು ಅಸಮರ್ಪಕವಾಗಿ ಶೇಖರಿಸಿಟ್ಟಿರುವುದು, ಕಾನೂನುಬಾಹಿರವಾಗಿ ಮರೆಮಾಚಿರುವುದಕ್ಕೆ ಸಂಬಂಧಿಸಿ ಸರಕಾರ ಕ್ರಿಮಿನಲ್ ತನಿಖೆ ನಡೆಸುತ್ತಿದೆ ಎಂದು ಎಫ್ಬಿಐ ಅಧಿಕಾರಿಗಳು ಅಫಿದಾವಿತ್ನ ಪ್ರಥಮ ಪುಟದಲ್ಲಿ ಬರೆದಿದ್ದಾರೆ.
ವರ್ಗೀಕರಣದ ಗುರುತಿದ್ದ 184 ದಾಖಲೆಗಳಲ್ಲಿ 25 ಉನ್ನತ ರಹಸ್ಯ ದಾಖಲೆಗಳಾಗಿವೆ. ಕೆಲವು ದಾಖಲೆಗಳಲ್ಲಿ ವಿಶೇಷ ಗುರುತುಗಳಿದ್ದು ಇವು ಸೂಕ್ಷ್ಮ ಮಾನವ ಮೂಲಗಳಿಂದ ಅಥವಾ ವಿಶೇಷ ಗುಪ್ತಚರ ದಳದಿಂದ ದೊರಕಿರುವ ಮಾಹಿತಿಯನ್ನು ಒಳಗೊಂಡಿವೆ. ಇಂತಹ ಮಹತ್ವದ ದಾಖಲೆಗಳನ್ನು ದಿನಪತ್ರಿಕೆಯ ಜತೆ ಇರಿಸಿರುವುದು ಆಡಳಿತ ವ್ಯವಸ್ಥೆಯ ಬಗ್ಗೆ ಟ್ರಂಪ್ ಗೆ ಇರುವ ಗೌರವದ ಕೊರತೆಯನ್ನು ತೋರಿಸುತ್ತದೆ. ವರ್ಗೀಕೃತ ಮತ್ತು ವರ್ಗೀಕೃತವಲ್ಲದ ದಾಖಲೆಗಳನ್ನು ಮಿಶ್ರ ಮಾಡಬಾರದು ಎಂಬ ಮೂಲ ನಿಯಮವನ್ನೇ ಇಲ್ಲಿ ಅವರು ಉಲ್ಲಂಘಿಸಿದ್ದಾರೆ ಎಂದು ಮಾಜಿ ಸಿಐಎ ಅಧಿಕಾರಿ ಡಗ್ಲಾಸ್ ಲಂಡನ್ ಹೇಳಿದ್ದಾರೆ.
ಇದೀಗ ಎಫ್ಬಿಐ ಅಧಿಕಾರಿಗಳು ಅಫಿದಾವಿತ್ ಅನ್ನು ನ್ಯಾಯಾಧೀಶರಿಗೆ ಸಲ್ಲಿಸಿರುವುದರಿಂದ ಟ್ರಂಪ್ ಅವರ ಆಸ್ತಿಯನ್ನು ಶೋಧ ನಡೆಸಲು ವಾರಾಂಟ್ ಪಡೆಯಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ.







