ಭಾರತದಿಂದ 75,000 ಶಿಕ್ಷಣ ಅನುಮತಿ ಅರ್ಜಿ ಸಲ್ಲಿಕೆ : ಕೆನಡಾ
ಟೊರಂಟೊ, ಆ.27: ಭಾರತದ 75,000 ವಿದ್ಯಾರ್ಥಿಗಳು ಸಲ್ಲಿಸಿರುವ ಶಿಕ್ಷಣ ಪರವಾನಿಗೆ ಅರ್ಜಿ ಪರಿಶೀಲನಾ ಹಂತದಲ್ಲಿದ್ದು, ಇದೀಗ ಸೆಪ್ಟಂಬರ್ನಲ್ಲಿ ಶಿಕ್ಷಣ ಆರಂಭವಾಗುವ ವಿದ್ಯಾರ್ಥಿಗಳ ಅರ್ಜಿಯನ್ನು ಆದ್ಯತೆಯ ಮೇರೆಗೆ ಮೊದಲು ಪರಿಶೀಲನೆ ನಡೆಸಲಾಗುವುದು ಎಂದು ಕೆನಡಾ ಸರಕಾರದ ಅಧಿಕಾರಿ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ ದೂರ ಶಿಕ್ಷಣ ಆಯ್ಕೆಯನ್ನು ಮತ್ತೊಂದು ವರ್ಷ ಮುಂದುವರಿಸಲಾಗುವುದು. ಜಾಗತಿಕವಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಶೀಘ್ರ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆನಡಾದ ವಲಸೆ, ನಿರಾಶ್ರಿತ ಮತ್ತು ಪೌರತ್ವ ಇಲಾಖೆ(ಐಆರ್ಸಿಸಿ)ಯ ವಕ್ತಾರರು ಹೇಳಿದ್ದಾರೆ. ವಿದೇಶದಿಂದ ಆನ್ಲೈನ್ ಮೂಲಕ ಅಧ್ಯಯನ ಮಾಡುತ್ತಿರುವ, ಅಥವಾ 2022ರ ಆಗಸ್ಟ್ 31ರೊಳಗೆ ಸ್ಟಡಿ ಪರ್ಮಿಟ್ಗೆ ಅರ್ಜಿ ಸಲ್ಲಿಸುವವರು ತಮ್ಮ 100% ಅಧ್ಯಯನವನ್ನು ಆನ್ಲೈನ್ ಮೂಲಕವೇ ನಡೆಸಬಹುದಾಗಿದೆ ಎಂದವರು ವಿವರಿಸಿದ್ದಾರೆ.
2022ರ ಆರಂಭಿಕ 5 ತಿಂಗಳಲ್ಲೇ ಐಆರ್ಸಿಸಿಯು ಭಾರತದ ವಿದ್ಯಾರ್ಥಿಗಳಿಂದ ಸುಮಾರು 1,23,500 ಸ್ಟಡಿ ಪರ್ಮಿಟ್ ಅರ್ಜಿ ಸ್ವೀಕರಿಸಿದ್ದು ಇದು 2019ರ ಇದೇ ಅವಧಿಗಿಂತ 55% ಹೆಚ್ಚಳವಾಗಿದೆ. ಸುಮಾರು 75,000 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಪ್ರಸ್ತುತ, ಭಾರತದ ಸುಮಾರು 2,30,000 ವಿದ್ಯಾರ್ಥಿಗಳು ಕೆನಡಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿ ಮಾಡಿಕೊಂಡಿದ್ದು ಸುಮಾರು 4 ಶತಕೋಟಿ ಕೆನಡಿಯನ್ ಡಾಲರ್ನಷ್ಟು ಶಿಕ್ಷಣ ಶುಲ್ಕ ಪಾವತಿಸುವ ಮೂಲಕ ಕೆನಡಾದ ಅರ್ಥವ್ಯವಸ್ಥೆಗೆ ಧನಾತ್ಮಕ ಕೊಡುಗೆ ನೀಡುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.







