ಲಿಬಿಯಾದಲ್ಲಿ ಭುಗಿಲೆದ್ದ ಘರ್ಷಣೆ
ಟ್ರಿಪೋಲಿ, ಆ.೨೭: ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಶುಕ್ರವಾರ ತಡರಾತ್ರಿ ಭುಗಿಲೆದ್ದಿರುವ ಘರ್ಷಣೆ ಶನಿವಾರವೂ ಮುಂದುವರಿದಿದ್ದು ವಿರೋಧಿ ಬಣಗಳ ಮಧ್ಯೆ ಭೀಕರ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟ್ರಿಪೋಲಿ ನಗರದ ಬೀದಿಗಳಲ್ಲಿ ವಿರೋಧಿ ಬಣಗಳು ಪರಸ್ಪರರನ್ನು ಗುರಿಯಾಗಿಸಿ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದು ಜನತೆ ಆತಂಕಗೊಂಡಿದ್ದಾರೆ. ಲಿಬಿಯಾದ ಸರಕಾರವನ್ನು ನಿಯಂತ್ರಿಸುವ ವಿಷಯದಲ್ಲಿ ಆರಂಭಗೊಂಡ ರಾಜಕೀಯ ಬಿಕ್ಕಟ್ಟು ಸಂಷರ್ಘಕ್ಕೆ ತಿರುಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಲಿಬಿಯಾದಲ್ಲಿ ೨ ಸರಕಾರಗಳಿವೆ. ರಾಜಧಾನಿ ಟ್ರಿಪೋಲಿಯಲ್ಲಿ ಅಬ್ದುಲ್ಹಮೀದ್ ಅಲ್ ಡಿಬೇಬಾ ನೇತೃತ್ವದ ʼನ್ಯಾಷನಲ್ ಯೂನಿಟಿʼ ಸರಕಾರವಿದ್ದರೆ, ಪೂರ್ವ ಪ್ರಾಂತದ ಸಂಸತ್ತಿನಲ್ಲಿ ಫತಿ ಬಷಾಗ ನೇತೃತ್ವದ ಆಡಳಿತವಿದೆ. ಸರಕಾರದ ನಿಯಂತ್ರಣದ ವಿಷಯದಲ್ಲಿ ಈ ವಿರೋಧಿ ಬಣಗಳೊಳಗೆ ಆಗಾಗ ಸಂಘರ್ಷ ನಡೆಯುತ್ತಲೇ ಇದೆ. ಹಿಂಸಾಚಾರದ ಮೂಲಕ ವಿವಾದ ಇತ್ಯರ್ಥಗೊಳಿಸುವ ಯಾವುದೇ ಪ್ರಯತ್ನದ ವಿರುದ್ಧ ಲಿಬಿಯಾದಲ್ಲಿರುವ ವಿಶ್ವಸಂಸ್ಥೆಯ ನಿಯೋಗ ಎಚ್ಚರಿಕೆ ನೀಡಿದೆ.