ಕನ್ನಡ ಸಾಹಿತ್ಯಕ್ಕೆ ಉಲಮಾಗಳಿಂದ ಪ್ರೋತ್ಸಾಹ ಶ್ಲಾಘನೀಯ: ಅರವಿಂದ ಚೊಕ್ಕಾಡಿ

ಬಂಟ್ವಾಳ, ಆ.27: ಧಾರ್ಮಿಕ ಆಚಾರ ವಿಚಾರಗಳಿಗೆ ನೇತೃತ್ವ ನೀಡುವುದರ ಜೊತೆಗೆ ಮುಸ್ಲಿಮ್ ಧರ್ಮ ಗುರುಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಅಭಿಪ್ರಾಯ ಪಟ್ಟರು.
ಕುಂಬಳೆ ಇಮಾಂ ಶಾಫಿ ಅಕಾಡಮಿ ಸ್ಥಾಪಕ ಶೈಖುನಾ ಖಾಸಿಂ ಉಸ್ತಾದರ ಕನ್ನಡಿಗ ಶಿಷ್ಯ ಬಳಗ 'ರೌಳತುಲ್ ಉಲಮಾ' ಆಯೋಜಿಸಿದ್ದ 'ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಲ್ಪ ಸಂಖ್ಯಾತರ ಸ್ಥಿತಿಗತಿ' ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಶನಿವಾರ ನೇರಳಕಟ್ಟೆ ಸಮಸ್ತ ಮಹಲ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 'ಮುಸ್ಲಿಮರು ಮತ್ತು ಕನ್ನಡ ಸಾಹಿತ್ಯ' ಬಗ್ಗೆ ಅವರು ವಿಚಾರ ಮಂಡಿಸಿದರು.
ಕನ್ನಡ ಓದುಗರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಸೀದಿ, ಜಮಾಅತ್ ಮೂಲಕ ಸಾಹಿತ್ಯ ಕೃತಿಗಳನ್ನು ಸಾರ್ವಜನಿಕರಿಗೆ ಪರಿಚಯಿಸಿ ಕೊಟ್ಟರೆ ಅದರಿಂದ ಸಮಾಜದಲ್ಲಿ ಬಹಳಷ್ಟು ಧನಾತ್ಮಕ ಬದಲಾವಣೆಗಳು ಉಂಟಾಗಿ ಕನ್ನಡದ ಬೆಳವಣಿಗೆಗೂ ಇನ್ನಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕನ್ನಡದಲ್ಲಿ ಸೇವೆ ಮಾಡಿದ ಹಲವಾರು ಸಾಹಿತಿಗಳನ್ನು ಸ್ಮರಿಸಿದ ಅವರು, ತೊಂಬತ್ತರ ದಶಕದ ನಂತರ ದೇಶದ ಕೋಮು ಆಧಾರಿತ ಧ್ರುವೀಕರಣದಿಂದಾಗಿ ಮುಸ್ಲಿಮ್ ಸಾಹಿತಿಗಳೂ ಬಹಳ ಇಕ್ಕಟ್ಟಿನಲ್ಲಿ ಸಿಲುಕಿದ ಪರಿಸ್ಥಿತಿ ಉಂಟಾಗಿದೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಝುನೈಫ್ ಕೋಲ್ಪೆ, ಬಿ.ಎಂ.ರಮೀಝಾ, ಹಾರಿಸ್ ಬಾಂಬಿಲ ಅವರಿಗೆ ಸಮಸ್ತ ಮುಶಾವರ ಸದಸ್ಯ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಶಸ್ತಿ ಪ್ರದಾನ ಮಾಡಿದರು.
ಎಂ.ಪಿ.ಮುಹಮ್ಮದ್ ಸಹದಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಬಿ.ಮುಹಮ್ಮದ್ ದಾರಿಮಿ ಅಧ್ಯಕ್ಷತೆ ವಹಿಸಿದರು. ಶೇಖ್ ಮುಹಮ್ಮದ್ ಇರ್ಫಾನಿ, ಅಲಿ ದಾರಿಮಿ ಕಿನ್ಯ, ಮೂಸಾ ನಿಝಾಮಿ, ಅಯೂಬ್ ಮುಸ್ಲಿಯಾರ್ ನೆಲ್ಯಾಡಿ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಅಬ್ದುಲ್ ಅಝೀಝ್ ದಾರಿಮಿ ಕೊಡಾಜೆ, ಉಮರ್ ದಾರಿಮಿ ಆತೂರು, ಮಜೀದ್ ದಾರಿಮಿ ಏನಾಜೆ, ಅಶ್ರಪ್ ಹನೀಫಿ ಉಪ್ಪಿನಂಡಿ, ಹಮೀದ್ ದಾರಿಮಿ ಗೋಲ್ತಮಜಲ್, ಜಬ್ಬಾರ್ ಅರ್ಶದಿ ಮಿತ್ತೂರು, ಹಮೀದ್ ಹಾಜಿ ಸಾಲ್ಮರ, ಶೌಕತ್ ಫೈಝಿ ಕನ್ಯಾನ, ರಝಾಕ್ ದಾರಿಮಿ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು.
ಕೆ.ಎಲ್.ದಾರಿಮಿ ಪ್ರಸ್ತಾವನೆಗೈದರು. ಮಜೀದ್ ದಾರಿಮಿ ಮಿತ್ತೂರು ಸ್ವಾಗತಿಸಿದರು. ನಿಝಾಮಿ ಮಜೀದ್ ವಂದಿಸಿದರು. ಖಾಸಿಂ ಉಸ್ತಾದ್ ಮತ್ತು ಮರ್ಹೂಂ ಕನ್ಯಾನ ಸುಲೈಮಾನ್ ಪೈಝಿ ಉಸ್ತಾದರ ಹೆಸರಲ್ಲಿ ತಹ್ಲೀಲ್ ಸಮರ್ಪಣೆ ನಡೆಯಿತು.
