ಸುರತ್ಕಲ್; ಎಸೆಸೆಲ್ಸಿ, ಪಿಯುಸಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

ಸುರತ್ಕಲ್, ಆ.28: ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ 7ನೇ ವಿಭಾಗ ಕಾಟಿಪಳ್ಳ- ಕೃಷ್ಣಾಪುರ ಇದರ ಆಶ್ರಯದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ 2021- 2022ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ರವಿವಾರ ಕೃಷ್ಣಾಪುರ ವಿಶ್ವಕರ್ಮ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಧ್ಯಕ್ಷ ಪಿ.ಕೆ. ದಾಮೋದರ ಆಚಾರ್ಯ ಅವರು ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಅರ್ಥಶಾಸ್ತ್ರ ಸಹಪ್ರಾಧ್ಯಾಪಕ ಪ್ರೊ. ಹರೀಶ್ ಕುಮಾರ್, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿ ಕೊಂಡು ವಿದ್ಯೆಯ ಜೊತೆಗೆ ಸಮಾಜ ಆಗುಹೋಗುಗಳನ್ನು ತಿಳಿದುಕೊಂಡಲ್ಲಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ 2021-22ನೇ ಸಾಲಿನ ಪಿಯುಸಿ(ವಿಜ್ಞಾನ) ಅಂತಿಮ ಪರೀಕ್ಷೆಯಲ್ಲಿ 6ನೇ ರಾಂಕ್ ಗಳಿಸಿದ ಸಹನಾ ಆಚಾರ್ಯ ಹಾಗೂ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ತನ್ವಿ ಆಚಾರ್ಯ, ಸಂಜನಾ ಆಚಾರ್ಯ ಅವರನ್ನು ಇದೇ ವೇಳರ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಮ್ ಆರ್ ಪಿ ಎಲ್ ಒಎನ್‌ಜಿಸಿ ಇಲೆಕ್ಟ್ರಿಕಲ್ ಮೈಂಟೆನೆನ್ಸ್ ಡಿಪಾರ್ಟ್ಮೆಂಟ್ ಮ್ಯಾನೇಜರ್ ವಿ.ಶಿವಲಿಂಗ ಆಚಾರ್ಯ, ಉದ್ಯಮಿ ವಿವೇಕ್ ಆಚಾರ್ಯ ಕೃಷ್ಣಾಪುರ, ಸಂಘದ ಅಧ್ಯಕ್ಷ ಭವಾನಿ ಶಂಕರ್ ಆಚಾರ್ಯ, ಉಪಾಧ್ಯಕ್ಷ ಮಂಜುನಾಥ ಆಚಾರ್ಯ, ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಶಾಂತಾನರಸಿಂಹ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಧಾಕರ ಆಚಾರ್ಯ ಸ್ವಾಗತಿಸಿದರು. ಸುಧಾವಿಶ್ವನಾಥ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯಜ್ಞೇಶ್ ಆಚಾರ್ಯ ವಂದಿಸಿದರು.
