ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನ; ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ

ಬಂಟ್ವಾಳ, ಆ.28: ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮ ರವಿವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಬೆಳ್ತಂಗಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶತಮಾನಗಳ ಬಳಿಕ ನಡೆಯುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ದೇವರ ಪ್ರೇರಣೆಯ ಯೋಗ, ಭಾಗ್ಯವೆಂದು ತಿಳಿದು ಈ ಪುಣ್ಯ ಕಾರ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡಾಗ ಕಾರ್ಯ ಯಶಸ್ವಿಯಾಗುವುದು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಿಜ್ಞಾಪನಾ ಪತ್ರದ ಬಿಡುಗಡೆಗೊಳಿಸಿ ಮಾತನಾಡಿ, ಭೂ ಮಸೂದೆ ಬಳಿಕ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರೂ ಆರ್ಥಿಕವಾಗಿ ಸ್ಥಿತಿವಂತರಾಗಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ದುರ್ಬಲ ವರ್ಗದ ಸಾಮಾಜಿಕ ನ್ಯಾಯ ವಂಚಿತರಿಗೂ ಅವಕಾಶವಾಗಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ. ನಮಗೆ ದೇವರು ನೀಡಿದ್ದರಲ್ಲಿ ದೇವರಿಗೆ ನೀಡಬೇಕು. ಆಗ ಆರಾಧನಾ ಕೇಂದ್ರಗಳು ಸುಸ್ಥಿತಿಯಲ್ಲಿರುತ್ತದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪುರೋಹಿತ ವ್ಯಾಸ ಪಾಂಗಣ್ಣಾಯ, ಪ್ರಧಾನ ಅರ್ಚಕ ಪ್ರಶಾಂತ್ ಐತಾಳ್,ಮುಖ್ಯಪ್ರಾಣ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ವೀರೇಂದ್ರ ಅಮೀನ್, ಸಂತೋಷ್ ಕುಮಾರ್ ಜೈನ್, ಪುರುಷೋತ್ತಮ ಶೆಟ್ಟಿ ವಾಮದಪದವು, ಅನಂತರಾಮ ನಾಯಕ್, ದಿವಾಕರ, ಶಿವಪ್ರಸಾದ್, ಜಾರಪ್ಪ ಕುಲಾಲ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಆಡಳಿತ ಸಮಿತಿ ಕಾರ್ಯದರ್ಶಿ ಸುರೇಶ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಗಟ್ಟಿ ವಂದಿಸಿದರು.