ಕುಂದಾಪುರ; ವರ್ಷ ಪೂರೈಸಿದ ʼಸ್ವಚ್ಛ ಕಡಲತೀರ -ಹಸಿರು ಕೋಡಿʼ ಅಭಿಯಾನ
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾದ ʼಸ್ವಚ್ಛ ಕಡಲತೀರ - ಹಸಿರು ಕೋಡಿʼ ಅಭಿಯಾನ ಇಂದಿಗೆ ಒಂದು ವರ್ಷ ಪೂರೈಸಿದ್ದು, ಪ್ರತಿ ತಿಂಗಳ ಕೊನೆಯ ರವಿವಾರ ನಡೆಯುವ ಈ ಅಭಿಯಾನವು ಆ.28ರಂದು ನಡೆಯಿತು.
ಒಂದು ವರ್ಷ ಪೂರೈಸಿರುವ ಅಭಿಯಾನಕ್ಕೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಸಿದ್ದೀಕ್ ಬ್ಯಾರಿ ಚಾಲನೆ ನೀಡಿದರು.
ಈ ಅಭಿಯಾನದಿಂದ ಕೋಡಿ ಕಡಲತೀರ ಪ್ರಾಕೃತಿಕವಾಗಿ ವಿಶೇಷವಾಗಿ ಕಾಣಿಸಿಕೊಂಡಿದೆ, ಕಡಲಾಮೆಗಳ ವಂಶಾಭಿವೃದ್ಧಿಯ ತೀರ ಪ್ರದೇಶವಾಗಿ ಪರಿವರ್ತನೆಗೊಂಡು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕೀರ್ತಿಗೆ ಕಾರಣ ನಮ್ಮ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯದ್ ಮಹಮದ್ ಬ್ಯಾರಿ ಹಾಗೂ ವಿಶ್ವಸ್ಥ ಮಂಡಳಿಯ ಸದಸ್ಯರು. ಅವರ ಕನಸು ನನಸಾಗುತ್ತಿದೆ ಎಂದರು.
ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಕುಂದಾಪುರ ಪುರಸಭೆಯ ಅಧ್ಯಕ್ಷರು, ಮುಖ್ಯಾಧಿಕಾರಿಗಳು, ಸದಸ್ಯರು ಹಾಗೂ ಕೋಟೇಶ್ವರ ಗ್ರಾಪಂ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸರ್ವಸದಸ್ಯರು, ಸಿಬ್ಬಂದಿ ಮತ್ತು ಪ್ರತಿ ತಿಂಗಳ ಈ ಅಭಿಯಾನದಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿರುವ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಸಾರ್ವಜನಿಕರು, ಹಳೆ ವಿದ್ಯಾರ್ಥಿಗಳು, ಊರಿನ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯದ್ ಮಹಮ್ಮದ್ ಬ್ಯಾರಿ ಅಭಿನಂದನೆ ಸಲ್ಲಿಸಿದ್ದಾರೆ.