ನಾರಾಯಣ ಗುರು ಕಲ್ಪನೆಯ ಮನುಷ್ಯನನ್ನು ಕಾಣಲು ಇನ್ನೂ ಸಾಧ್ಯವಾಗಿಲ್ಲ: ಪ್ರೊ.ಇ.ವಿ.ರಾಮಕೃಷ್ಣನ್
‘ನಾರಾಯಣ ಗುರು: ಸಂತ, ಸುಧಾರಕ, ಕವಿ’ ಉಪನ್ಯಾಸ

ಮಂಗಳೂರು : ಜಾತಿ ಆಧಾರದಲ್ಲಿ ಮನುಷ್ಯನನ್ನು ನಿಕೃಷ್ಟವಾಗಿ ಕಾಣಲಾಗುತ್ತಿದ್ದ ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿದ ಕ್ರಾಂತಿಯ ಬಳಿಕ ಸಾಕಷ್ಟು ಬದಲಾವಣೆಗಳಾಯಿತು. ಆದರೆ ನಾರಾಯಣ ಗುರುವಿನ ಕಲ್ಪನೆಯಲ್ಲಿದ್ದ ಮನುಷ್ಯನನ್ನು ಕಾಣಲು ಇನ್ನೂ ಸಾಧ್ಯವಾಗಿಲ್ಲ ಎಂದು ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ, ಕೇರಳದ ಪಯ್ಯನ್ನೂರಿನ ಪ್ರೊ. ಇ.ವಿ. ರಾಮಕೃಷ್ಣನ್ ಹೇಳಿದರು.
ನಗರದ ಪಿ.ಪಿ. ಗೋಮತಿ ಸ್ಮಾರಕ ಶಿಕ್ಷಣ ಟ್ರಸ್ಟ್ ಮತ್ತು ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರವಿವಾರ ನಡೆದ ‘ನಾರಾಯಣ ಗುರು: ಸಂತ, ಸುಧಾರಕ, ಕವಿ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
16ನೇ ಶತಮಾನದಲ್ಲಿ ಆಚರಣೆಯಲ್ಲಿದ್ದ ಜೀತಪದ್ಧತಿಯು ಮೂರು ಶತಮಾನಗಳವರೆಗೂ ಮುಂದುವರಿದಿತ್ತು. ಬಟ್ಟೆ, ಆಭರಣಗಳನ್ನು ಧರಿಸುವುದಕ್ಕೂ ಅವಕಾಶವಿಲ್ಲದವರ ಮಧ್ಯೆ ಯಾವ ಜಾತಿಯ ಹೆಸರನ್ನೂ ಹೇಳದೆ ಆಂದೋಲನ ಮಾಡಿದ ನಾರಾಯಣಗುರು ನವ ಕೇರಳ ಮತ್ತು ನವ ಸಮಾಜದ ಕನಸು ಕಂಡಿದ್ದರು. ಆದರೆ ಕೇರಳದಲ್ಲಿ ಈಗಲೂ ಸುಮಾರು 220ರಷ್ಟು ಜಾತಿಗಳಿವೆ. ನಾಯರ್ ಸಮುದಾಯದಲ್ಲೇ 41 ಉಪಜಾತಿಗಳನ್ನು ಕಾಣಬಹುದಾಗಿದೆ. ಇತರ ಜಾತಿಗಳಲ್ಲಿ 170ಕ್ಕೂ ಅಧಿಕ ಉಪಜಾತಿಗಳಿವೆ ಎಂದು ರಾಮಕೃಷ್ಣನ್ ವಿಷಾದಿಸಿದರು.
ಲೇಖಕ, ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾರಾಯಣ ಗುರು ವಿರಚಿತ ಕಾವ್ಯವನ್ನು ವಿದ್ವಾನ್ ಟಿ.ಎಂ. ಕೃಷ್ಣ ಹಾಡಿದರು.













