"ಪ್ರತಿಭಟನೆ ನಡೆಸಿದರೂ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗದ ಇಲಾಖೆ"
ಹೋರಾಟ ತೀವ್ರಗೊಳಿಸಲು ಜೋಕಟ್ಟೆಯಲ್ಲಿ ನಾಗರಿಕ ಹೋರಾಟ ಸಮಿತಿ ನಿರ್ಧಾರ

ಸುರತ್ಕಲ್ : ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಭೆಯು ಜೋಕಟ್ಟೆಯ ಕೋಡ್ದಬ್ಬು ದೈವಸ್ಥಾನದ ಬಳಿ ರವಿವಾರ ನಡೆಯಿತು.
ಪರಿಸರದಲ್ಲಿ ಕೈಗಾರಿಕೆಗಳಿಂದ ಹೆಚ್ಚುತ್ತಿರುವ ಮಾಲಿನ್ಯ, ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗ್ರಾಮದ ಪ್ರಮುಖರು ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂಭಾಗ ಪ್ರತಿಭಟನಾ ಸಭೆ ನಡೆಸಿ ಒಂದು ವಾರ ಸಂದರೂ ಯಾವುದೇ ಕ್ರಮಗಳು ಜರುಗದ ಹಿನ್ನಲೆಯಲ್ಲಿ ಹೋರಾಟ ವನ್ನು ತೀವ್ರಗೊಳಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶವನ್ನು ಜಾರಿಗೆ ತರದ ಎಂಆರ್ ಪಿಎಲ್ ಮೇಲೆ ಕ್ರಮ ಜರುಗಿಸದ, ಪಲ್ಗುಣಿ ನದಿಗೆ ವಿಷ ಹರಿಸುತ್ತಿರುವ ರುಚಿ ಗೋಲ್ಡ್, ಅದಾನಿ ವಿಲ್ಮಾ, ಯು. ಬಿ. ಬಿಯರ್ ಸಹಿತ ಸುತ್ತ ಮುತ್ತಲ ಕೈಗಾರಿಕಾ ಕಂಪೆನಿಗಳನ್ನು ನಿಯಂತ್ರಿಸದ ಮಾಲಿನ್ಯ ನಿಯಂತ್ರಣ ಮಂಡಳಿಯ ವೈಫಲ್ಯವನ್ನು ಖಂಡಿಸಿ ಮಂಡಳಿಯ ಅಣಕು ಶವ ಯಾತ್ರೆ, ಪ್ರತಿಕೃತಿ ದಹನವನ್ನು ಕಚೇರಿಯ ಮುಂಭಾಗ ಸೆ.7ರಂದು ನಡೆಸಲು ನಿರ್ಧರಿಸಲಾಯಿತು.
ಸೆಪ್ಟಂಬರ್ ಮೂರನೇ ವಾರದಲ್ಲಿ ಎಂಆರ್ ಪಿಎಲ್ ಮುಂಭಾಗ ಹಗಲು ರಾತ್ರಿ ಧರಣಿ ನಡೆಸುವುದು ಎಂದು ನಿರ್ಧರಿಸಲಾಯಿತು. ಸಭೆಯಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹೋರಾಟ ಸಮಿತಿಯ ಪ್ರಮುಖರಾದ ಅಬೂಬಕ್ಕರ್ ಬಾವ, ಮನೋಜ್ ಜೋಕಟ್ಟೆ, ಪ್ರಸಾದ್ ಶೆಟ್ಟಿ, ಐತಪ್ಪ ಜೋಕಟ್ಟೆ, ಲಿಂಗಪ್ಪ ನಿರ್ಮುಂಜೆ, ಚಂದ್ರಶೇಖರ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಹನೀಫ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ರೋನಿ, ವೆಂಕಟೇಶ್ ಕೆಂಜಾರು, ಗಣೇಶ್ ಜೋಕಟ್ಟೆ, ವಿಶ್ವನಾಥ ಹಾಗೂ ಗ್ರಾಮಸ್ಥರು ಹಾಜರಿದ್ದರು.