ಉತ್ತರಪ್ರದೇಶ: ಕಳ್ಳನೆಂದು ಆರೋಪಿಸಿ ದಲಿತ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ

ಬರೇಲಿ, ಆ. 28: ಕಿರಾಣಿ ಅಂಗಡಿಯಿಂದ 600 ರೂ. ಕಳವುಗೈದ ಆರೋಪದಲ್ಲಿ 14 ವರ್ಷದ ದಲಿತ ಬಾಲಕನೋರ್ವನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಉತ್ತರಪ್ರದೇಶದ ಶಾಹಜಹಾನ್‌ಪುರ ಜಿಲ್ಲೆಯ ಕಲಾನ್‌ನಲ್ಲಿ ನಡೆದಿದೆ.
ಆಗಸ್ಟ್ 22ರಂದು ವರದಿಯಾದ ಈ ಘಟನೆಯ ವೀಡಿಯೊವನ್ನು ಗ್ರಾಮ ನಿವಾಸಿಯೊಬ್ಬರು ದಾಖಲಿಸಿದ್ದರು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಸ್ವಯಪ್ರೇರಿತವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
ವೀಡಿಯೊ ದೃಶ್ಯಾವಳಿಯಲ್ಲಿ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿರುವುದು, ಥಳಿಸುತ್ತಿರುವುದು ಹಾಗೂ ಅಂಗಡಿ ಮಾಲಕ ಆತನ ವಿಚಾರಣೆ ನಡೆಸುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
‘‘ನಾನು ದಿನಸಿ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿ ಮನೆಗೆ ಹಿಂದಿರುಗಿದ್ದೆ. ಅನಂತರ ಅಂಗಡಿಯ ಮಾಲಿಕ ನಮ್ಮ ಮನೆಗೆ ಆಗಮಿಸಿದ. ನನಗೆ ನಿಂದಿಸಿದ ಹಾಗೂ ಥಳಿಸಿದ. ನಾನು ಅಂಗಡಿಯಿಂದ ಹಣ ಕದ್ದಿದ್ದೇನೆ ಎಂದು ಆರೋಪಿಸಿದ’’ ಎಂದು ಬಾಲಕ ಹೇಳಿದ್ದಾನೆ.
‘‘ನಾನು ಅಮಾಯಕ ಎಂದು ಮನವಿ ಮಾಡಿದೆ. ಆದರೆ, ಆತ ನನ್ನ ಮನೆಯಲ್ಲಿ ಶೋಧ ಹಾಗೂ ದಾಂಧಲೆ ನಡೆಸಿದ. ನನ್ನನ್ನು ಮನೆಯಿಂದ ಹೊರಗೆ ಎಳೆದು ಕೊಂಡು ಬಂದ. ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ. ಎಲ್ಲರೂ ನನ್ನನ್ನು ನೋಡಿ ಅಪಹಾಸ್ಯ ಮಾಡಿದರು. ಕೆಲವರು ಥಳಿಸಿದರು. ನನ್ನನ್ನು ಕಳ್ಳ ಎಂದು ಕರೆದರು’’ ಎಂದು ಬಾಲಕ ಹೇಳಿದ್ದಾನೆ.
ಬಾಲಕ ಪೋಷಕರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
‘‘ನಾವು ಬಾಲಕ ಹಾಗೂ ಆತನ ತಂದೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ’’ ಎಂದು ಜಲಲಾಬಾದ್‌ನ ಸರ್ಕಲ್ ಅಧಿಕಾರಿ ಮಸ್ಸಾ ಸಿಂಗ್ ಅವರು ತಿಳಿಸಿದ್ದಾರೆ.







