ಅಮೆರಿಕದಲ್ಲಿ ಆಗಂತುಕನಿಂದ ಗುಂಡಿನ ದಾಳಿ: ಮೂವರು ಬಲಿ

ವಾಷಿಂಗ್ಟನ್: ಅಮೆರಿಕದ ಡೆಟ್ರಾಯ್ಟ್ ಸಿಟಿಯಲ್ಲಿ ರವಿವಾರ ಆಗಂತುಕನೊಬ್ಬ ನಡೆಸಿದ ಬೇಕಾಬಿಟ್ಟಿ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ತೀವ್ರ ಗಾಯಗೊಂಡಿದ್ದು, ಸರಣಿ ಹಂತಕನಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಇವರ ಮೇಲೆ ಗುಂಡು ಹಾರಿಸಲಾಗಿದ್ದು, ಗುಂಡೇಟಿನ ಗುರುತುಗಳು ದೇಹದಲ್ಲಿ ಕಾಣಿಸುತ್ತಿವೆ ಎಂದು ಪೊಲೀಸ್ ಮುಖ್ಯಸ್ಥ ಜೇಮ್ಸ್ ವೈಟ್ ಹೇಳಿದ್ದಾರೆ.
ನಾಲ್ಕನೇ ವ್ಯಕ್ತಿ ಶಂಕಿತ ಆರೋಪಿಯನ್ನು ಪತ್ತೆ ಮಾಡಿದ್ದು, ನಿಲ್ಲುವಂತೆ ಸೂಚಿಸಿದಾಗ ಆತನ ಮೇಲೂ ಒಂದು ಬಾರಿ ಗುಂಡು ಹಾರಿಸಿದ. ಶಂಕಿತನ ಭಾವಚಿತ್ರವನ್ನು ಬಹಿರಂಗಪಡಿಸಲಾಗಿದ್ದು, ಈತ ಪತ್ತೆಯಾದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಮುಖ್ಯಸ್ಥರು ಕೋರಿದ್ದಾರೆ.
ಮೃತಪಟ್ಟವರ ಪೈಕಿ ಇಬ್ಬರು ಬಸ್ಸಿಗೆ ಕಾಯುತ್ತಿದ್ದರು. ಇನ್ನೊಬ್ಬರು ನಾಯಿಯೊಂದಿಗೆ ವಾಯುವಿಹಾರಕ್ಕೆ ತೆರಳುತ್ತಿದ್ದವರು ಹಾಗೂ ಮತ್ತೊಬ್ಬ ಆಗಸ್ಟೇ ಬೀದಿಗೆ ಬಂದಿದ್ದ ಎಂದು ವೈಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಲವು ಏಜೆನ್ಸಿಗಳು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದು, ಯಾರಿಗಾದರೂ ಆತನ ಸುಳಿವು ಪತ್ತೆಯಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮೇಯರ್ ಮೈಕ್ ದುಗ್ಗನ್ ಕೋರಿದ್ದಾರೆ.
ಇನ್ನೊಂದು ಶೂಟಿಂಗ್ ಘಟನೆಯಲ್ಲಿ ಹೌಸ್ಟನ್‍ನ ಟೆಕ್ಸನ್‍ನಲ್ಲಿ ವ್ಯಕ್ತಿಯೊಬ್ಬ ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಆಗಂತುಕ ಮೊದಲು ಮನೆಗೆ ಬೆಂಕಿ ಹಚ್ಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ಬೆಂಕಿ ಹಚ್ಚಿ, ಜನ ಹೊರಬರುವುದನ್ನು ಕಾಯುತ್ತಿದ್ದ ಆರೋಪಿ ಬಳಿಕ ದಾಳಿ ನಡೆಸಿದ ಎಂದು ವಿವರಿಸಿದ್ದಾರೆ.