ಪುಂಜಾಲಕಟ್ಟೆ | 2 ಬೈಕ್ ಗಳ ಮಧ್ಯೆ ಅಪಘಾತ: ಓರ್ವ ಕಾಲೇಜು ವಿದ್ಯಾರ್ಥಿ ಮೃತ್ಯು; ಇಬ್ಬರು ಗಂಭೀರ

ಬೆಳ್ತಂಗಡಿ, ಆ.29: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಆಗಂತುಕನಿಂದ ಗುಂಡಿನ ದಾಳಿ: ಮೂವರು ಬಲಿ
ಶಫೀಕ್ ಇಂದು ಬೆಳಗ್ಗೆ ತನ್ನ ಬೈಕಿನಲ್ಲಿ ಕಾಲೇಜಿಗೆ ಹೊರಟಿದ್ದರು. ಅವರು ಪುಂಜಾಲಕಟ್ಟೆ ಮೇಲಿನಪೇಟೆ ಶಾರದಾ ಮಂಟಪದ ಬಳಿ ತಲುಪಿದಾಗ ಅವರ ಬೈಕ್ ಮತ್ತು ಮಂಡತ್ಯಾರ್ ತರಕಾರಿ ಅಂಗಡಿಯ ಕೆಲಸಗಾರರಿಬ್ಬರು ಸಂಚರಿಸುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದೆ. ಈ ವೇಳೆ ರಸ್ತೆಗೆಸೆಯುಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಶಫೀಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನೊಂದು ಬೈಕಿನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
