ಕುಪ್ಪೆಟ್ಟಿ | ಟಿಪ್ಪರ್ ಢಿಕ್ಕಿ: ಬೈಕ್ ಸವಾರ, ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು
ಪುಂಜಾಲಕಟ್ಟೆಯಲ್ಲಿ ಅಪಘಾತದಿಂದ ಸಂಬಂಧಿಕ ಮೃತಪಟ್ಟ ಸುದ್ದಿ ತಿಳಿದು ತೆರಳುತ್ತಿದ್ದ ವೇಳೆ ಘಟನೆ

ಬೆಳ್ತಂಗಡಿ, ಆ.29: ಬೈಕಿಗೆ ಟಿಪ್ಪರ್ ವಾಹನ ಢಿಕ್ಕಿ(Accident) ಹೊಡೆದ ಪರಿಣಾಮ ಐಟಿಐ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಕಕ್ಕೆಪದವು ನಿವಾಸಿ ಮುಹಮ್ಮದ್ ಸಫ್ವಾನ್(20) ಮೃತಪಟ್ಟವರು. ಇವರು ತುಂಬೆ ಐಟಿಐ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು.
ಇಂದು ಬೆಳಗ್ಗೆ ಪುಂಜಾಲಕಟ್ಟೆ ಮೇಲಿನಪೇಟೆಯ ಶಾರದಾ ಮಂಟಪದ ಬಳಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ, ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಶಫೀಕ್(20) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಮುಹಮ್ಮದ್ ಸಫ್ವಾನ್ ಅವರ ಸಂಬಂಧಿಕರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಪಘಾತದ ವಿಷಯ ತಿಳಿದ ಮುಹಮ್ಮದ್ ಸಫ್ವಾನ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆಂದು ಬೈಕಿನಲ್ಲಿ ಬರುತ್ತಿದ್ದಾಗ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ಎಂಬಲ್ಲಿ ಟಿಪ್ಪರ್ ವಾಹನವೊಂದು ಬೈಕಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಸಫ್ವಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಪುಂಜಾಲಕಟ್ಟೆ | 2 ಬೈಕ್ ಗಳ ಮಧ್ಯೆ ಅಪಘಾತ: ಓರ್ವ ವಿದ್ಯಾರ್ಥಿ ಮೃತ್ಯು; ಇಬ್ಬರು ಗಂಭೀರ
ಅಪಘಾತದ ಬಳಿಕ ಟಿಪ್ಪರ್ ವಾಹನ ಚಾಲಕ ಟಿಪ್ಪರ್ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನೂ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.