ದ.ಕ. ಜಿಲ್ಲೆಗೆ ಪ್ರವೇಶಿಸಿದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ: ಸಂಪಾಜೆಯಲ್ಲಿ ಭವ್ಯ ಸ್ವಾಗತ

ಸುಳ್ಯ, ಆ.29: ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಾಗುವ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸೋಮವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಿತು.
ಕೊಡಗು ಜಿಲ್ಲೆಯಿಂದ ಆಗಮಿಸಿದ ಪ್ರತಿಮೆಗೆ ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಗೇಟ್ ಬಳಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಪೂರ್ಣ ಕುಂಭದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಂದರು, ಮೀನುಗಾರಿಗೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ, ಶಾಸಕ ಕ.ಜಿ.ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ತಹಶೀಲ್ದಾರ್ ಅನಿತಾಲಕ್ಷ್ಮಿ ನೇತೃತ್ವದಲ್ಲಿ ಪ್ರತಿಮೆಯನ್ನು ಅದ್ದೂರಿಯಾಗಿ ಸ್ವಾಗತಿಸಿ ಬೃಹತ್ ಮೆರವಣಿಗೆಯ ಮೂಲಕ ಸಂಪಾಜೆಯ ಮುಖ್ಯ ರಸ್ತೆಯಲ್ಲಿ ಕರೆ ತರಲಾಯಿತು.
ಇದನ್ನೂ ಓದಿ: ಪ್ರಧಾನಿ ಭೇಟಿ ಹಿನ್ನೆಲೆ | ಬಂಗ್ರಕೂಳೂರಿನ ಟೆಂಟ್ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ: ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಪ್ರಮುಖರಾದ ಭರತ್ ಮುಂಡೋಡಿ, ಎಂ.ಬಿ.ಸದಾಶಿವ, ಟಿ.ಎಂ.ಶಾಹೀದ್, ಕಿರಣ್ ಬುಡ್ಲೆಗುತ್ತು, ಚಂದ್ರ ಕೋಲ್ಚಾರ್, ಡಾ.ಉಜ್ವಲ್ ಊರುಬೈಲು, ಪಿ.ಸಿ.ಜಯರಾಮ, ದೊಡ್ಡಣ್ಣ ಬರೆಮೇಲು, ಬಿ.ಟಿ.ಮಾಧವ, ಡಾ.ಎನ್.ಎ.ಜ್ಞಾನೇಶ್, ಡಿ.ಎಸ್.ಗಿರೀಶ್, ಸಂತೋಷ್ ಜಾಕೆ, ಅಬೂ ಸಾಲಿ, ರಹೀಂ ಬೀಜದಕಟ್ಟೆ, ಮಿತ್ರದೇವ ಮಡಪ್ಪಾಡಿ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಬಳಿಕ ಅರಂತೋಡು, ಪೆರಾಜೆಯಲ್ಲಿ ಪುಷ್ಪಾರ್ಚನೆ ಮಾಡಿ ಪ್ರತಿಮೆಯನ್ನು ಸ್ವಾಗತಿಸಲಾಯಿತು. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಕಂಚಿನ ಪ್ರತಿಮೆ ತಯಾರಾಗಿ ಅಲ್ಲಿಂದ ಹೊರಟ ಮೆರವಣಿಗೆ, ಆದಿಚುಂಚನಗಿರಿ ಮಠ, ಕೊಡಗಿನ ವಿವಿಧ ಭಾಗಗಳಲ್ಲಿ ನಡೆದ ಅದ್ದೂರಿ ಸ್ವಾಗತವನ್ನು ಸ್ವೀಕರಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿತು.








