ತುಳು ಭಾಷೆಯ ಮಾನ್ಯತೆಗಾಗಿ 'ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನ'

ಮಂಗಳೂರು, ಆ.29: ತುಳುವೆರ್ ಕುಡ್ಲ (ರಿ) ಮಂಗಳೂರು, ತುಳುನಾಡು ವಾರ್ತೆ ವಾರಪತ್ರಿಕೆ ಮತ್ತು 'ನಮ್ಮ ಟಿ.ವಿ' ಸಂಯುಕ್ತ ಆಶ್ರಯದಲ್ಲಿ 'ನಮ್ಮ ಪ್ರಧಾನಿಗೆ ತುಳುವೆರೆ ಪೋಸ್ಟ್ ಕಾರ್ಡ್' ಎಂಬ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಂಘಟಕ ನವೀನ್ ಶೆಟ್ಟಿ ಎಡ್ಮೆಮಾರ್, ಸೆ 1ರಂದು ಬೆಳಗ್ಗೆ 10:30ಕ್ಕೆ ಬಂಜಾರ್ ಮಲೆ ಗ್ರಾಮದಿಂದ ಈ ಅಭಿಯಾನ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕಳೆದ ಸುಮಾರು ವರ್ಷಗಳಿಂದ ತುಳು ಭಾಷೆಗೆ ಮಾನ್ಯತೆ ಸಿಗದಿರುವ ಕಾರಣ ಅನೇಕ ಸಂಘ ಸಂಸ್ಥೆಗಳು ತಮ್ಮ ಧ್ವನಿಯನ್ನು ಎತ್ತಿದರೂ ಈವರೆಗೆ ಯಾವುದೇ ಫಲ ಲಭಿಸಿರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಳುವರಿಂದ ಪೋಸ್ಟ್ ಕಾರ್ಡ್ ಮೂಲಕ ತುಳುಬಾಷೆಗೆ ಅಧಿಕೃತ ಮಾನ್ಯತೆಯನ್ನು ಒದಗಿಸಬೇಕಾಗಿ ಈ ವಿಭಿನ್ನ ರೀತಿಯಲ್ಲಿ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅಭಿಯಾನವು 1,00,000ಕ್ಕೂ ಅಧಿಕ ಪೋಸ್ಟ್ ಕಾರ್ಡ್‌ನ್ನು ತುಳುವರಿಂದ ಅಂಚೆಯ ಮೂಲಕ ಪ್ರಧಾನಿಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ ಎಂದವರು ವಿವರಿಸಿದರು.
ಈ ಅಭಿಯಾನವು ಯಾವುದೇ ರಾಜಕೀಯ/ವೈಯಕ್ತಿಕ ಉದ್ದೇಶವನ್ನು ಹೊಂದಿಲ್ಲ. ಅಭಿಯಾನವು ಚಾಲನೆಯಾದ ಬಳಿಕ ಎಲ್ಲಾ ತುಳುಪರ ಸಂಘಟನೆಗಳು, ರಾಜಕೀಯ ಪಕ್ಷ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ಎಲ್ಲಾ ಸಂಘ ಸಂಸ್ಥೆಗಳು ಅಭಿಯಾನದಲ್ಲಿ ನಮ್ಮೊಂದಿಗೆ ಕೈಜೋಡಿಸಿಕೊಳ್ಳಬೇಕು ಎಂದು ತುಳುವೆರ್ ಕುಡ್ಲದ ಅಧ್ಯಕ್ಷ ಪ್ರತೀಕ್ ಪೂಜಾರಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ಪೂಜಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಂ, ತುಳುನಾಡ ವಾರ್ತೆಯ ಪುನೀತ್ ಉಪಸ್ಥಿತರಿದ್ದರು.







