ಕೊಡಗಿನಲ್ಲಿ ಮತ್ತೆ ಅವಾಂತರ ಸೃಷ್ಟಿಸಿದ ಮಹಾಮಳೆ: ವ್ಯಾಪಕ ಹಾನಿ, ನಷ್ಟ

ಮಡಿಕೇರಿ ಆ.29 : ಕೊಡಗಿನಲ್ಲಿ ಮಹಾಮಳೆ ಮತ್ತೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಆ.28ರ ರಾತ್ರಿ ಮತ್ತು ಆ.29ರ ಬೆಳಗ್ಗೆ ವರೆಗೆ ನಿರಂತರವಾಗಿ ಸುರಿದ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಮತ್ತು ವಣಚಲು ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ವಣಚಲುವಿನಲ್ಲಿ ದಾಖಲೆಯ 9.30 ಇಂಚು ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಒಟ್ಟು 227.77 ಇಂಚು ಮಳೆ ಸುರಿದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ 8.30 ಇಂಚು ಮಳೆಯಾಗಿದೆ. ಮರ ಸಹಿತ ಗುಡ್ಡ ಕುಸಿದ ಪರಿಣಾಮ ವಣಚಲು ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ದ್ವೀಪದಂತ್ತಾಗಿದ್ದು, ನದಿ ನೀರು ತುಂಬಿ ಹರಿದು ಶ್ರೀಭಗಂಡೇಶ್ವರ ದೇವಾಲಯದ ಆವರಣವನ್ನು ತಲುಪಿತ್ತು. ನಾಪೋಕ್ಲು ಮತ್ತು ಮಡಿಕೇರಿ ರಸ್ತೆಯ ಮೇಲೂ ನೀರು ಹರಿಯಿತು. ರವಿವಾರ ಹಗಲಿನಲ್ಲಿ ನದಿಯ ನೀರು ತಗ್ಗಿತ್ತು. ಆದರೆ ಸೋಮವಾರ ಬೆಳಗ್ಗೆ ಪ್ರವಾಹದ ರೀತಿಯಲ್ಲಿ ನದಿ ಹರಿಯುತ್ತಿದ್ದ ದೃಶ್ಯ ಕಂಡು ಬಂತು. ರಾತ್ರಿ ಪೂರ್ತಿ ದಾಖಲೆಯ ಮಳೆ ಸುರಿದಿದ್ದು, ಇದೀಗ ಮೋಡದ ವಾತಾವರಣವಿದೆ.
ಊರುಬೈಲು, ಚೆಂಬು, ಸಂಪಾಜೆ, ಕೊಯನಾಡು ಭಾಗದಲ್ಲೂ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ. ಕೊಯನಾಡು ಕಿಂಡಿ ಅಣೆಕಟ್ಟೆಯಲ್ಲಿ ಮತ್ತೆ ಮರಗಳ ರಾಶಿ ಬಂದು ನಿಂತಿದೆ. ಪ್ರವಾಹದ ನೀರು ಅಕ್ಕಪಕ್ಕದ ಮನೆಗಳ ಬಳಿ ಬಂದಿದೆ. ಸಂಪಾಜೆಯಿಂದ ಊರುಬೈಲು ಗ್ರಾಮಕ್ಕೆ ಹೋಗುವ ಸೇತುವೆ ಹಾನಿಗೀಡಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಕರಿಕೆ ಮತ್ತು ಭಾಗಮಂಡಲ ರಸ್ತೆಯಲ್ಲಿ ಬೃಹತ್ ಬರೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸರಣಿ ಭೂಕಂಪನದ ಚೆಂಬು ಗ್ರಾಮದಲ್ಲಿ ಅತ್ಯಧಿಕ ಮಳೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಮನೆಗಳಿಗೂ ಹಾನಿಯಾಗಿದೆ.
ರವಿವಾರ ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಆದರೆ ಇಂದು ತಿಳಿ ಬಿಸಿಲಿನ ವಾತಾವರಣವಿದ್ದು, ಕಳೆದ 12 ಗಂಟೆಗಳ ಕಾಲ ಸುರಿದ ಮಹಾಮಳೆಗೆ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕ ಮಳೆಯಿಂದ ಕಾಫಿ, ಕರಿಮೆಣಸು, ಭತ್ತ ಮತ್ತು ಅಡಿಕೆ ಬೆಳೆಗೆ ಹಾನಿಯಾಗಿದೆ.






.jpeg)
.jpeg)
.jpeg)

