ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆ; ಮಂಗಳೂರಿನಲ್ಲಿ ಬಿಗು ಬಂದೋಬಸ್ತ್, ತೀವ್ರ ತಪಾಸಣೆ
ಬಂಗ್ರಕೂಳೂರಿನಲ್ಲಿ ಸಮಾವೇಶಕ್ಕೆ ಸಿದ್ಧತೆ

ಮಂಗಳೂರು, ಆ.29: ನಗರ ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್‌ನಲ್ಲಿ ಸೆ.2ರಂದು ನಡೆಯುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವುದರಿಂದ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಬಿಗು ಬಂದೋಬಸ್ತ್ ನಡೆಸಲಾಗುತ್ತಿದೆ.
ರವಿವಾರದಿಂದಲೇ ಪೊಲೀಸರು ವಾಹನಗಳ ತಪಾಸಣೆ ನಡೆಸಲು ಆರಂಭಿಸಿದ್ದು, ಸೋಮವಾರ ತಪಾಸಣೆ ತೀವ್ರಗೊಳಿಸಿದ್ದಾರೆ. ಸಮದ್ರ ತೀರದಲ್ಲೂ ಗಸ್ತು ಆರಂಭಿಸಲಾಗಿದ್ದು, ಕರಾವಳಿ ಕಾವಲು ಪಡೆ ಕಣ್ಗಾವಲು ನಡೆಸುತ್ತಿದೆ.
ಈಗಾಗಲೆ ಬಂಗ್ರಕೂಳೂರಿನಲ್ಲಿ ಸಿದ್ಧತೆ ಕಾರ್ಯ ಭರದಿಂದ ನಡೆಯುತ್ತಿವೆ. ಈ ಮಧ್ಯೆ ಬಿಜೆಪಿಯು ಇದನ್ನು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಪ್ರಧಾನಿ ಮೋದಿಯ ಪ್ರಯಾಣದ ವೇಳೆ 2 ಕಿ.ಮೀ.ಗಿಂತ ಹೆಚ್ಚು ರಸ್ತೆ ಮೂಲಕ ಸಂಚಾರಕ್ಕೆ ಅವಕಾಶವಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸೂಚಿಸಿದ ಹಿನ್ನ್ನೆಲೆಯಲ್ಲಿ ಸಮಾವೇಶ ನಡೆಯುವ ಗೋಲ್ಡ್ ಫಿಂಚ್ ಮೈದಾನದ ಸಮೀಪವೇ ಮೂರು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ.
ಸೆ.2ರ ಸಂಜೆ ಪ್ರಧಾನಿ ಕೊಚ್ಚಿನ್‌ನಿಂದ ವಿಶೇಷ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್ (3 ಹೆಲಿಕಾಪ್ಟರ್ ಬಳಸಲಾಗುತ್ತದೆ) ಮೂಲಕ ಸಮಾವೇಶದ ಸ್ಥಳಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿಯ ಭದ್ರತೆಯ ಮೇಲುಸ್ತುವಾರಿ ವಹಿಸಿರುವ ಎಸ್‌ಪಿಜಿ ತಂಡವು ಆ.30ರಂದು ಮಂಗಳೂರಿಗೆ ಆಗಮಿಸಲಿದೆ. ಸಮಾವೇಶ ನಡೆಯುವ ಸ್ಥಳದ 200 ಮೀ. ದೂರದಲ್ಲಿ ಸೇಫ್ ರೂಂ ನಿರ್ಮಿಸಲು ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದ ಮೇರೆಗೆ ಕರಾವಳಿ ಕಾಲೇಜು, ಎ.ಜೆ. ಇಂಜಿನಿಯರಿಂಗ್ ಕಾಲೇಜು ಸಹಿತ ಪರಿಸರದ ಒಂದು ಕಟ್ಟಡವನ್ನು ಎಸ್‌ಪಿಜಿ ತಂಡವು ಸೇಫ್ ರೂಂ ಎಂದು ಘೋಷಿಸಲಿದೆ ಎಂದು ತಿಳಿದು ಬಂದಿದೆ.
ಗೋಲ್ಡ್‌ಫಿಂಚ್‌ನ ಸುಮಾರು 30 ಎಕರೆ ಮೈದಾನದ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಮಾವೇಶ ನಡೆಯುವ ಸುತ್ತಮುತ್ತಲಿನ ಎಲ್ಲಾ ಅಂಗಡಿ, ಹೊಟೇಲ್, ಕಚೇರಿಗಳನ್ನು ಸೆ.1 ಮತ್ತು 2ರಂದು ಮುಚ್ಚಲು ಕಾವೂರು ಪೊಲೀಸ್ ಠಾಣೆಯ ಪೊಲೀಸರು ಸೂಚನೆ ನೀಡಿದ್ದಾರೆ. ಹಾಗಾಗಿ ಎರಡು ದಿನ ಕೂಳೂರು, ಕೊಟ್ಟಾರ ಚೌಕಿ ಪ್ರದೇಶ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಅಲ್ಲದೆ ಈ ಭಾಗದ ವಾಹನಗಳ ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆಗೊಳ್ಳಲಿದೆ ಎಂದು ತಿಳಿದು ಬಂದಿದೆ.