ಎನ್‍ಡಿಪಿಎಸ್ ಕಾಯ್ದೆಯಡಿ ಭಾಂಗ್ ನಿಷೇಧಿಸಲಾಗಿಲ್ಲ: ಹೈಕೋರ್ಟ್

ಬೆಂಗಳೂರು, ಆ.29: ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟಾನ್ಸ್ (ಎನ್‍ಡಿಪಿಎಸ್) ಕಾಯ್ದೆಯಡಿ ಭಾಂಗ್ (Bhang) ನಿಷೇಧಿತ ಮಾದಕ ಪದಾರ್ಥ ಅಥವಾ ಪಾನೀಯ ಎಂದು ಘೋಷಿಸಲಾಗಿಲ್ಲ ಎಂದು ಹೈಕೋರ್ಟ್ ತೀರ್ಪು ಹೊರಡಿಸಿದೆ. ಅಲ್ಲದೆ, 29 ಕೆಜಿ ಭಾಂಗ್ ಪೌಡರ್ ಹೊಂದಿದ್ದ ವ್ಯಕ್ತಿಯೋರ್ವನಿಗೆ ಜಾಮೀನು ಮಂಜೂರು ಮಾಡಿದೆ.
ಬೇಗೂರು ಪೊಲೀಸರು ಜೂ.1ರಂದು ಬಿಹಾರ ಮೂಲದ ರೋಷನ್ ಕುಮಾರ್ ಮಿಶ್ರಾ ಎಂಬಾತನನ್ನು ಬಂಧಿಸಿದ್ದರು. ನಂತರ ಬಂಧಿತನಿಂದ 400 ಗ್ರಾಂ ಗಾಂಜಾ ಜೊತೆಗೆ ಬ್ರಾಂಡ್ ಭಾಂಗ್ ಅನ್ನು ವಶಪಡಿಸಿಕೊಂಡಿದ್ದರು. ಬಂಧಿತ ಮಿಶ್ರಾನಿಗೆ ಅಧೀನ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರೋಷನ್ ಕುಮಾರ್ ಮಿಶ್ರಾ ಕರ್ನಾಟಕ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದ.
ಭಾಂಗ್ ಅನ್ನು ಚರಸ್ ಅಥವಾ ಗಾಂಜಾ ಎಲೆಗಳು ಅಥವಾ ಗಾಂಜಾ ಬೀಜಗಳಿಂದ ತಯಾರಿಸಲಾಗುತ್ತದೆ ಎಂದು ತೋರಿಸಲು ಕೋರ್ಟ್ ಮುಂದೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ. ಬಳಿಕ ಆರೋಪಿ ರೋಷನ್ ಕುಮಾರ್ ಮಿಶ್ರಾಗೆ ಜಾಮೀನು ನೀಡಿದ್ದಾರೆ.





