ಸಫೂರಾ ಝರ್ಗರ್ ಪ್ರವೇಶವನ್ನು ರದ್ದುಗೊಳಿಸಿದ ಜಾಮಿಯಾ

Student activist Safoora Zargar
ಹೊಸದಿಲ್ಲಿ,ಆ.29: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಸಮಾಜಶಾಸ್ತ್ರ ವಿಭಾಗವು ದಿಲ್ಲಿ ಗಲಭೆಗಳ ಆರೋಪಿ ಸಫೂರಾ ಝರ್ಗರ್ ಅವರ ಪ್ರವೇಶವನ್ನು ಸೋಮವಾರ ರದ್ದುಗೊಳಿಸಿದೆ. ಝರ್ಗರ್ ಏಕೀಕೃತ ಎಂ.ಫಿಲ್/ಪಿಎಚ್ಡಿಗಾಗಿ ಸಮಾಜಶಾಸ್ತ್ರ ವಿಭಾಗದಲ್ಲಿ ದಾಖಲಾಗಿದ್ದರು.
‘ಫ್ಯಾಕಲ್ಟಿ ಕಮಿಟಿಯು ಇದನ್ನು ಅನುಮೋದಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಸಾಮಾನ್ಯವಾಗಿ ಬಸವನಹುಳುವಿನ ವೇಗದ ಜಾಮಿಯಾ ಆಡಳಿತವು ನನ್ನ ಪ್ರವೇಶವನ್ನು ರದ್ದುಗೊಳಿಸಲು ಎಲ್ಲ ಸೂಕ್ತ ಪ್ರಕ್ರಿಯೆಗಳನ್ನು ಬದಿಗಿರಿಸಿ ಮಿಂಚಿನ ವೇಗದಲ್ಲಿ ಕೆಲಸ ಮಾಡಿದೆ. ನಿಮಗೆ ತಿಳಿದಿರಲಿ,ಇದು ನನ್ನ ಹೃದಯವನ್ನು ಒಡೆಯಬಹುದು,ಆದರೆ ನನ್ನ ಚೈತನ್ಯವನ್ನಲ್ಲ ’ ಎಂದು ಝರ್ಗರ್ ತನ್ನ ಟ್ವಟರ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಎಂ.ಫಿಲ್ ಪ್ರಬಂಧ ಸಲ್ಲಿಕೆಗಾಗಿ ಅವಧಿ ವಿಸ್ತರಣೆಯನ್ನು ಕೋರಿ ತಾನು ಸಲ್ಲಿಸಿರುವ ಅರ್ಜಿಯನ್ನು ಎಂಟು ತಿಂಗಳುಗಳಿಂದ ತಡೆಹಿಡಿಯಲಾಗಿದೆ ಎಂದು ಝರ್ಗರ್ ಬುಧವಾರ ಟ್ವೀಟಿಸಿದ್ದರು. ತನಗೆ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಎಂದು ಸಂಶೋಧನಾ ಸಲಹಾ ಸಮಿತಿ (ಆರ್ಎಸಿ)ಯು ತನಗೆ ವೌಖಿಕವಾಗಿ ತಿಳಿಸಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಝರ್ಗರ್ ಹೇಳಿದ್ದರು.
ಝರ್ಗರ್ ಪ್ರಗತಿಯ ಬಗ್ಗೆ ಮೇಲ್ವಿಚಾರಕರ ವರದಿಯು ಅತೃಪ್ತಿಕರವಾಗಿದೆ. ನಿಗದಿತ ಗಡುವು ಅಂತ್ಯಗೊಳ್ಳುವ ಮುನ್ನ ಮಹಿಳಾ ಸ್ಕಾಲರ್ ಆಗಿ ವಿಸ್ತರಣೆಗೆ ಅವರು ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂದು ಜಾಮಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಝರ್ಗರ್ ತನ್ನ ಎಂ.ಫಿಲ್ ಪ್ರಬಂಧವನ್ನು ಸಲ್ಲಿಸಿಲ್ಲ. ಹೀಗಾಗಿ ಎಂ.ಫಿಲ್/ಪಿಎಚ್ಡಿಗಾಗಿ ಅವರ ನೋಂದಣಿಯನ್ನು ಆ.22ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಫ್ಯಾಕಲ್ಟಿ ಸಮಿತಿಯು ಇದನ್ನು ಅನುಮೋದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದೂ ಜಾಮಿಯಾ ಹೇಳಿದೆ. 2020,ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳ ಸಂದರ್ಭದಲ್ಲಿ ಭುಗಿಲೆದ್ದಿದ್ದ ಗಲಭೆಗಳಿಗೆ ಸಂಬಂಧಿಸಿದಂತೆ ಸಂಚು ರೂಪಿಸಿದ್ದ ಅರೋಪದಲ್ಲಿ 2020 ಎಪ್ರಿಲ್ನಲ್ಲಿ ಝರ್ಗರ್ ಅವರನ್ನು ಬಂಧಿಸಲಾಗಿತ್ತು. ಆಗ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು.
ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಝರ್ಗರ್ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
BREAKING | The #JamiaMilliaIslamia Board of Studies has cancelled student activist #SafooraZargar's MPhil admission. @SafooraZargar pic.twitter.com/f6XluStIty
— Ahmed Kasim (@Kassuism) August 29, 2022







