ರೈತರಿಂದ ಹೆಚ್ಚಿನ ಪರಿಹಾರ ಕೋರಿ ಅರ್ಜಿ| ಮೂರು ತಿಂಗಳಲ್ಲಿ ತಂತ್ರಾಂಶ ಅಭಿವೃದ್ಧಿ: ಹೈಕೋರ್ಟ್ ಗೆ ಸರಕಾರದ ಹೇಳಿಕೆ

ಬೆಂಗಳೂರು, ಆ.29: ರೈತರ ಭೂಮಿ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಭೂಸ್ವಾಧೀನದ ಎಲ್ಲ ಪ್ರಕ್ರಿಯೆಗಳನ್ನು ಒಂದೇ ತಂತ್ರಾಂಶದ ಅಡಿ ಆನ್‍ಲೈನ್‍ನಲ್ಲಿ ನಿರ್ವಹಿಸಲು 3 ತಿಂಗಳೊಳಗೆ ತಂತ್ರಾಂಶ(ಸಾಫ್ಟವೇರ್) ಸಿದ್ಧಪಡಿಸುವಂತೆ ಕಂದಾಯ ಇಲಾಖೆಯು ಇ-ಆಡಳಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶಿಸಿದೆ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರವು ಹೇಳಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗಲಪುರ ಗ್ರಾಮದ ಮಾಧವಮೂರ್ತಿ ಅವರು ತಮ್ಮಿಂದ ವಶಪಡಿಸಿಕೊಳ್ಳಲಾದ ಭೂಮಿಗೆ ಹೆಚ್ಚಿನ ಪರಿಹಾರ ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.
ಪರಿಹಾರ ಹೆಚ್ಚಳ ಕೋರಿ ರೈತರು ಸಲ್ಲಿಸುವ ಅರ್ಜಿಗಳಿಗೆ ಸಂಖ್ಯೆ ನೀಡುವುದು, ಅರ್ಜಿಯ ಸ್ಥಿತಿಗತಿ ಅರಿಯುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಜೊತೆ ಸಭೆ ನಡೆಸಿ ವಿಧಾನ ಕಂಡು ಹಿಡಿಯಬೇಕು ಎಂದು ಹೈಕೋರ್ಟ್ ಪೀಠವು ಜೂ.27ರಂದು ನಿರ್ದೇಶಿಸಿತ್ತು. ಇದರ ಭಾಗವಾಗಿ ರಾಜ್ಯ ಸರಕಾರವು ಹೈಕೋರ್ಟ್‍ಗೆ ಅನುಪಾಲನಾ ವರದಿ ಸಲ್ಲಿಸಿದೆ.





