ಭೂಕುಸಿತದಿಂದ 4 ವರ್ಷದ ಬಾಲಕ ಸಹಿತ ಒಂದೇ ಕುಟುಂಬದ ಐವರು ಸಾವು

Photo : theprint.in
ಇಡುಕ್ಕಿ, ಆ. 29: ಇಡುಕ್ಕಿ ಜಿಲ್ಲೆಯ ತೊಡುಪುಳದ ಸಮೀಪದ ಕುಡಯತ್ತೂರಿನಲ್ಲಿ ಭಾರೀ ಮಳೆಯಿಂದಾಗಿ ಸೋಮವಾರ ಸಂಭವಿಸಿದ ಭೂಕುಸಿತದಿಂದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಭೂಕುಸಿತದ ಸಂದರ್ಭ ದೊಡ್ಡ ಬಂಡೆ ಹಾಗೂ ಮಣ್ಣು ಬಿದ್ದ ಪರಿಣಾಮ ಕುಡಯತ್ತೂರಿನ ಸಂಗಮ ಜಂಕ್ಷನ್ನ ಮಲಿಯೆಕ್ಕಾಲ್ ಕಾಲನಿಯಲ್ಲಿರುವ ಸೋಮನ್ ಎಂಬವರ ಮನೆ ಗುರುತೇ ಸಿಗದಂತೆ ನೆಲಸಮವಾಗಿದೆ.
ದುರಂತದಲ್ಲಿ ಸೋಮನ್, ಅವರ ಪತ್ನಿ ಶಿಜಿ, ತಾಯಿ ತಂಕಮ್ಮ, ಪುತ್ರಿ ಶೀಮಾ ಹಾಗೂ ಮೊಮ್ಮಗ 4 ವರ್ಷದ ದೇವಾನಂದ ಅವರ ಮೃತದೇಹ ಶೋಧ ಕಾರ್ಯಾಚರಣೆ ಸಂದರ್ಭ ಪತ್ತೆಯಾಗಿದೆ.
ಮನೆಯ ಅವಶೇಷಗಳ ಅಡಿಯಿಂದ ಪತ್ತೆಯಾಗಿರುವ ಮೃತದೇಹಗಳನ್ನು ತೊಡುಪುಳದಲ್ಲಿರುವ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈ ಘಟನೆ ಮುಂಜಾನೆ 3 ಗಂಟೆಗೆ ಸಂಭವಿಸಿದೆ. ರವಿವಾರ ರಾತ್ರಿ 11.30ರಿಂದ ಸೋಮವಾರ ಮುಂಜಾನೆ 3 ಗಂಟೆ ವರೆಗೆ ಧಾರಾಕಾರ ಮಳೆ ಸುರಿದಿದೆ. ಈ ಪ್ರದೇಶದಲ್ಲಿ 131 ಎಂಎಂ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ನಾಲ್ಕು ಕುಟುಂಬಗಳನ್ನು ಸಮೀಪದ ಪರಿಹಾರ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಅವರು ಹೇಳಿದ್ದಾರೆ. ರಾಜ್ಯ ಕಂದಾಯ ಸಚಿವ ಕೆ. ರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.





