ಬಿಲ್ಕೀಸ್ ಬಾನು ಅತ್ಯಾಚಾರಿಗಳ ಬಿಡುಗಡೆ ವಿರೋಧಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ

ಭಟ್ಕಳ: 2002ರಲ್ಲಿ ಗುಜರಾತಿನಲ್ಲಿ ನಡೆದ ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಅಲ್ಲಿನ ಸರ್ಕಾರ ಬಿಡುಗಡೆಗೊಳಿಸಿದ್ದನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ಘಟಕ ಸೋಮವಾರ ಇಲ್ಲಿನ ಹಳೆ ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಝಿಕಾ ಪರ್ವಿನ್, ಬಿಲ್ಕೀಸ್ ಬಾನು ಅವರ ಮೇಲೆ ಏನೆಲ್ಲ ನಡೆಯಿತೋ ಅದು ನಿಮ್ಮ ಹೆಣ್ಣುಮಕ್ಕಳೊಂದಿಗೆ ಆಗಿದ್ದರೆ ನೀವೇನು ಮಾಡುತ್ತಿದ್ದೀರಿ? ಅತ್ಯಾಚಾರಿಗಳನ್ನು ಹೂಹಾರ ಹಾಕಿ ಸ್ವಾಗತಿಸುತ್ತಿದ್ದೀರಾ ಎಂದು ಬಿಜೆಪಿಗರನ್ನು ಪ್ರಶ್ನಿಸಿದರು. ಬೇಟಿ ಪಡಾವೊ ಬೇಟಿ ಬಚಾವೋ ಎಂದು ಹೇಳುತ್ತಲೇ ಹೆಣ್ಣುಮಕ್ಕಳ ಅತ್ಯಾಚಾರಿಗಳನ್ನು ಬಚಾವೊ ಮಾಡುತ್ತಿದ್ದಾರೆ ಎಂದರು.
ಶಬೀನ್ ತಾಜ್ ಮಾತನಾಡಿ, ಬಿಲ್ಕೀಸ್ ಬಾನು ಅತ್ಯಾಚಾರಿಗಳನ್ನು ಬಿಡುಗೊಳಿಸಿದ್ದು ಮಹಿಳೆಯರ ಮೇಲೆ ನಿಮಗೆಷ್ಟು ಗೌರವವಿದೆ ಎನ್ನುವುದು ತೋರಿಸುತ್ತದೆ. ಬಿಡುಗಡೆಗೊಳಿಸಿದ ಅತ್ಯಾಚಾರಿ, ಹಂತಕರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು ಎಂದರು.
ಉ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್, ಅಬ್ದುಲ್ ಜಬ್ಬಾರ್ ಅಸದಿ ಮಾತನಾಡಿದರು. ಈ ಸಂದರ್ಭ ಫಾರೂಖ್ ಮಾಸ್ಟರ್, ಖಮರುದ್ದೀನ್ ಮಷಾಯಿಕ್, ಮುಸರ್ರತ್, ಜಬೀನ್ ಮುಂತಾದವರು ಉಪಸ್ಥಿತರಿದ್ದರು.







