ದಿಲ್ಲಿ ವಿಧಾನ ಸಭೆಯಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಿದ ಕೇಜ್ರಿವಾಲ್
‘‘ಬಿಜೆಪಿಯ ಆಪರೇಷನ್ ಕಮಲ ವಿಫಲ’’

ಹೊಸದಿಲ್ಲಿ, ಆ. 29: ಯಾವೊಬ್ಬ ಶಾಸಕ ಕೂಡ ಪಕ್ಷಾಂತರಗೊಂಡಿಲ್ಲ ಎಂಬುದನ್ನು ಸಾಬೀತುಪಡಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದಿಲ್ಲಿ ವಿಧಾನ ಸಭೆಯಲ್ಲಿ ಸೋಮವಾರ ವಿಶ್ವಾಸ ಮತ ಯಾಚಿಸುವ ಗೊತ್ತುವಳಿ ಮಂಡಿಸಿದರು. ಈ ಉದ್ದೇಶಕ್ಕಾಗಿ ದಿಲ್ಲಿ ವಿಧಾನ ಸಭೆಯ ವಿಶೇಷ ಅಧಿವೇಶನವನ್ನು ಒಂದು ದಿನಗಳ ಕಾಲ ವಿಸ್ತರಿಸಲಾಯಿತು.
ಬಿಜೆಪಿಯ ಆಪರೇಷನ್ ಕಮಲ ಉಳಿದ ರಾಜ್ಯಗಳಲ್ಲಿ ಯಶಸ್ವಿಯಾಗಿರಬಹುದು. ಆದರೆ, ಆಪ್‌ನ ಎಲ್ಲ ಶಾಸಕರು ಪ್ರಾಮಾಣಿಕರಾಗಿರುವುದರಿಂದ ಇಲ್ಲಿ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸಲು ಈ ಗೊತ್ತುವಳಿ ಮಂಡಿಸಲಾಗಿದೆ ಎಂದು ಕೇಜ್ರಿವಾಲ್ ಅವರು ಹೇಳಿದರು.
ಮಣಿಪುರ, ಬಿಹಾರ, ಅಸ್ಸಾಂ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳನ್ನು ಬಿಜೆಪಿ ಉರುಳಿಸಿದೆ. ಕೆಲವು ರಾಜ್ಯಗಳಲ್ಲಿ ಅದು 50 ಕೋ.ರೂ. ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಹಲವು ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆದಿದೆ ಎಂದು ಹೇಳಲಾಗುತ್ತಿದೆ. ಹಲವರು ನನಗೆ ಕರೆ ಮಾಡಿ ಎಲ್ಲವೂ ಸರಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಆದುದರಿಂದ ಒಬ್ಬನೇ ಒಬ್ಬ ಶಾಸಕ ಕೂಡ ಪಕ್ಷ ತ್ಯಜಿಸಿಲ್ಲ ಎಂಬುದನ್ನು ಸಾಬೀತುಪಡಿಸಲು ನಾನು ಸದನದಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಿದೆ. ಬಿಜೆಪಿಯ ಆಪರೇಷನ್ ಕಮಲ ಇಲ್ಲಿ ಆಪರೇಷನ್ ಕೆಸರು ಆಗಿದೆ’’ ಎಂದು ಕೇಜ್ರಿವಾಲ್ ಹೇಳಿದರು.
ಆಪ್‌ನ ಒಬ್ಬನೇ ಒಬ್ಬ ಶಾಸಕರನ್ನು ಖರೀದಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಹೇಳಿದ ಅವರು, ಬಿಜೆಪಿ ಮುಂದಿನ 15 ದಿನಗಳಲ್ಲಿ ಜಾರ್ಖಂಡ್‌ನ ಸರಕಾರವನ್ನು ಉರುಳಿಸಲು ಪ್ರಯತ್ನಿಸಲಿದೆ ಎಂದು ತಿಳಿಸಿದರು.
ಪ್ರಸ್ತುತ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಭ್ರಷ್ಟವಾಗಿದೆ. ಯಾಕೆಂದರೆ, ಅದು ಜನರ ತೆರಿಗೆ ಹಣದಿಂದ ಶಾಸಕರನ್ನು ಖರೀದಿಸುತ್ತಿದೆ. ಆದರೆ, ಕೋಟ್ಯಾಧೀಶ ಗೆಳೆಯರ ಸಾಲವನ್ನು ಮನ್ನಾ ಮಾಡುತ್ತಿದೆ ಎಂದು ಅವರು ಹೇಳಿದರು.
‘‘ಮುಂದಿನ 15 ದಿನಗಳಲ್ಲಿ ಅದು ಜಾರ್ಖಂಡ್ ಸರಕಾರವನ್ನು ಉರುಳಿಸಲು ಪ್ರಯತ್ನಿಸಲಿದೆ. ಅನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ’’ ಎಂದು ಕೇಜ್ರಿವಾಲ್ ಅವರು ಪ್ರತಿಪಾದಿಸಿದ್ದಾರೆ.







