ಮಹಾಮಾರ್ಗದ ಡಾ. ಎಂ.ಎಂ. ಕಲಬುರ್ಗಿ
ಡಾ. ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ 7 ವರ್ಷಗಳು

ನನ್ನ ಸಂಶೋಧನೆಯ ಮೇಲೆ ಅಪಾರ ಪ್ರಭಾವ ಬೀರಿದ್ದ ಅವರು ನನ್ನಂಥ ಕಿರಿಯರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ನಮ್ಮ ಸಂಶೋಧನಾ ಮಾದರಿ ಭಿನ್ನ ಭಿನ್ನವಾಗಿದ್ದರೂ ಅವರ ಅಭಿಪ್ರಾಯಗಳನ್ನು ನಾವು ಸುಲಭವಾಗಿ ಅಲ್ಲಗಳೆಯುವಂತಿರಲಿಲ್ಲ. ಕನ್ನಡಕ್ಕಾಗಿ, ವಿದ್ವತ್‌ವಲಯಕ್ಕಾಗಿ ತಮ್ಮ ಪ್ರಾಣತೆತ್ತ ಡಾ. ಕಲಬುರ್ಗಿ ಅವರ ನೆನಪು ಸದಾ ಜೀವಂತವಾಗಿರುತ್ತದೆ.
ಕವಿರಾಜಮಾರ್ಗ ಎಂಬುದು ಕನ್ನಡದಲ್ಲಿ ದೊರೆತ ಮೊದಲನೇ ಕೃತಿ. ಅದು ಕವಿಮಾರ್ಗವೂ, ಹೌದು ರಾಜಮಾರ್ಗವೂ ಹೌದು, ಕವಿರಾಜಮಾರ್ಗವೂ ಹೌದು. ಈ ಮೂರೂ ಮಾತು ಆ ಕೃತಿಗೆ ಕನ್ನಡಕ್ಕೆ ಶ್ರೀ ವಿಜಯನಿಗೆ, ನೃಪತುಂಗನಿಗೆ, ಅನ್ವಯವಾಗುವಂಥದ್ದು. ಮಾರ್ಗ-ದೇಸಿ ಎರಡೂ ಪ್ರಮುಖ ಮಾರ್ಗಗಳು. ಮಾರ್ಗವೆಂದರೆ ದಾರಿ, ಬರೆಯುವ ಶೈಲಿ, ಫಲಕು, ಭಾಷೆಯ ವೈವಿಧ್ಯ ಮುಂತಾದ ಅರ್ಥಗಳಿವೆ. ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬುದು ಕಲಬುರ್ಗಿಯವರ ಪಿಎಚ್.ಡಿ. ಮಹಾಪ್ರಬಂಧ. ಅದೊಂದು ಮಾರ್ಗದ ಆಸುಪಾಸಿನ ಸಾಹಿತ್ಯವನ್ನು, ಶಾಸನ ಸಾಹಿತ್ಯವನ್ನು, ರೂವಾರಿಗಳನ್ನು, ಕಂಡರಣೆಗಾರರನ್ನು ಗ್ರಹಿಸುವ ಮುಖ್ಯ ಕೃತಿ. ಕವಿರಾಜಮಾರ್ಗದಿಂದ ಪಂಪನವರೆಗಿನ ಸಾಹಿತ್ಯಾಧ್ಯಯನ, ಶಾಸನಾಧ್ಯಯನವನ್ನು ಗ್ರಹಿಸುವ ಬಹುಮುಖ್ಯ ಸಂಶೋಧನೆ. ಮೊದಲು ಅವರು ಕವಿರಾಜಮಾರ್ಗದ ಪಠ್ಯ ಸಂಪಾದನೆಗೆ ತೊಡಗಿ, ಅದು ಪರಿಪೂರ್ಣವಾಗಲಾರದೆಂದು ಮೂರು ಪರಿಚ್ಛೇದಗಳಲ್ಲಿ ಮೊದಲ ಪರಿಚ್ಛೇದವನ್ನು ಸಂಪಾದಿಸಿ ಆನಂತರ ಆ ಕೆಲಸ ಬಿಟ್ಟು ಸಂಶೋಧನೆಗೆ ತೊಡಗಿ ಈ ಕೃತಿಯನ್ನು ರೂಪಿಸಿದವರು.
ಗನ್ ಪಾಯಿಂಟ್‌ಗೆ ಜೀವತೆತ್ತ ಅನೇಕ ವಿದ್ವಾಂಸರು, ಬುದ್ಧಿಜೀವಿಗಳಲ್ಲಿ ಡಾಕ್ಟರ್ ಎಂ.ಎಂ. ಕಲಬುರ್ಗಿಯವರೂ ಒಬ್ಬರು. ಅವರ ಸಂಶೋಧನೆ ಬಹು ವೈವಿಧ್ಯ. ಶಾಸನಾಧ್ಯಯನ, ಸಂಶೋಧನೆ, ಸಂಪಾದನೆ ಮತ್ತು ಸಂಶೋಧನಾ ಶಾಸ್ತ್ರ, ಗ್ರಂಥ ಸಂಪಾದನೆ, ಜಾನಪದ ಹಾಗೂ ಕವಿತೆ ಮತ್ತು ನಾಟಕಗಳನ್ನು ಬರೆದವರು. ‘ತಲೆದಂಡ’ವನ್ನು ಗಿರೀಶ್ ಕಾರ್ನಾಡ್ ಬರೆಯುವಾಗ ವಚನ ಚಳವಳಿಯನ್ನು ಸರಿಯಾಗಿ ಗ್ರಹಿಸಿಲ್ಲವೆಂದು ತಾವು ‘ಕೆಟ್ಟಿತ್ತು ಕಲ್ಯಾಣ’ ಎಂಬ ನಾಟಕ ಬರೆದರು. ಅದು ಅವರ ಮಾಧ್ಯಮ ಅಲ್ಲ. ಆದರೂ ಲಂಕೇಶರ ‘ಸಂಕ್ರಾಂತಿ’, ಶಿವಪ್ರಕಾಶರ ‘ಮಹಾಚೈತ್ರ’, ಕಾರ್ನಾಡರ ‘ತಲೆದಂಡ’ ಎತ್ತುವ ಪ್ರಶ್ನೆಗಳ ಮುಂದೆ ಕಲಬುರ್ಗಿಯವರ ಈ ನಾಟಕ ಮುಖ್ಯವಾಗುವುದಿಲ್ಲ. ಅವರ ನಿಜವಾದ ಶಕ್ತಿ ಇರುವುದು ಸಂಶೋಧನೆಯಲ್ಲಿ. ಅವರ ಒಂದೊಂದು ಲೇಖನವೂ ತುಂಬ ಮುಖ್ಯವಾದ ಸಂಶೋಧನೆಯ ಕೊರತೆ ತುಂಬುವುದಲ್ಲದೆ ಹೊಸ ಚಿಂತನೆಗೆ ಕಾರಣವಾಗಿದೆ. ಗ್ರಂಥಸಂಪಾದನೆಯ ಕ್ಷೇತ್ರಕ್ಕೆ ಅವರು ಶಾಸ್ತ್ರ ಮತ್ತು ಪ್ರಯೋಗ ಎರಡನ್ನೂ ಸೇರಿಸಿದವರು. ಅವರ ಸಾವಿಗೆ ಅಂತ್ಯದಲ್ಲಿ ಮುಳುವಾದುದು ಅವರ ಸಂಶೋಧನೆ ಎಂಬುದು ಖೇದಕರ ಸಂಗತಿ. ಡಾ.ಯು. ಆರ್. ಅನಂತಮೂರ್ತಿಯವರು ತಮ್ಮ ಬಾಲ್ಯದಲ್ಲಿ ದೇವತಾಮೂರ್ತಿಯನ್ನು ನಾಸ್ತಿಕವಾದಿ ಗ್ರಹಿಸಿದ ಸಂದರ್ಭವೊಂದನ್ನು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಉಲ್ಲೇಖಿಸಿ ಮಂಡಿಸಿದ ಲೇಖನವು ಅನಂತಮೂರ್ತಿ ಅವರ ಬಾಲ್ಯದ ದೇವತಾ ಅಪರಾಧವನ್ನು ಕಲಬುರ್ಗಿಯವರ ತಲೆಗೆ ಕಟ್ಟಿದ ಅನೇಕ ಮಾಧ್ಯಮ ಪ್ರಶ್ನೆಗಳು ಅವರನ್ನೇ ಅಪರಾಧಿಯನ್ನಾಗಿಸಿ ಗನ್ ಪಾಯಿಂಟಿಗೆ ತಂದಿಟ್ಟು ಜೀವ ಹತ್ಯೆ ಮಾಡಿದ್ದು ನಮ್ಮ ಕಾಲದ ಬಹುದೊಡ್ಡ ದುರಂತಗಳಲ್ಲೊಂದು. ಕೊಂದವರು ಕೊಂದದ್ದು ವ್ಯಕ್ತಿಯನ್ನಲ್ಲ, ವ್ಯಕ್ತಿಯ ಸಂಶೋಧನಾ ಪ್ರವೃತ್ತಿಯನ್ನು. ಸಂಶೋಧಕ ಸಮಕಾಲೀನ ವಿಚಾರಗಳಿಗೆ ಮೂಕನಾಗಿರಬೇಕೆಂಬುದನ್ನು ಕಲಿಸುವ ಪಾಠವಾಗಿ ಅವರು ಹತ್ಯೆಗೀಡಾದರು. ಆದರೆ ವಿದ್ವತ್ ಕ್ಷೇತ್ರ ಹಾಗೆ ಎಂದೂ ಸುಮ್ಮನಾಗದು. ಅಲ್ಲಿ ಹೊಸ ದನಿ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತವೆ. ಕಲಬುರ್ಗಿಯವರನ್ನು ಕೊಂದು, ಗೌರಿಯವರನ್ನು ಕೊಂದು ಬೇರೆಯವರ ಬಾಯಿ ಮುಚ್ಚಿಸಲು ಯಾವ ಪ್ರಭುತ್ವಕ್ಕೂ ಸಾಧ್ಯವಿಲ್ಲದ ಮಾತು.
ಡಾ. ಕಲಬುರ್ಗಿಯವರು ಸಮಗ್ರ ವಚನ ಸಂಪಾದನೆ ಮಾಡುತ್ತಿದ್ದ ಕಾಲಕ್ಕೆ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ-ಸಾಹಿತ್ಯಗಳ ತೌಲನಿಕ ವಿಷಯ ಕುರಿತು ಸಂಶೋಧನೆ ಮಾಡಲು ಒಟ್ಟು 117 ಕಾದಂಬರಿಗಳನ್ನು ಓದಬೇಕಿತ್ತು. ಆ ಕಾಲಕ್ಕೆ 40ಕ್ಕೂ ಹೆಚ್ಚು ಕಾದಂಬರಿಗಳು ಧಾರವಾಡದಲ್ಲಿ ದೊರೆತವು. ಆಗ ನನಗೆ ಕೇರ್‌ಟೇಕರ್ ಆಗಿದ್ದವರು ಕಲಬುರ್ಗಿಯವರು. ಎಫ್.ಟಿ. ಹಳ್ಳಿಕೇರಿ ಮತ್ತು ಬಿರಾದಾರ ಎಂಬಿಬ್ಬರು ತಮ್ಮ ಸಂಶೋಧನಾ ವಿದ್ಯಾರ್ಥಿಗಳಲ್ಲಿ ನನಗೆ ಆಶ್ರಯ ಒದಗಿಸಿದ್ದರು. ಅವರ ಸಮಗ್ರ ವಚನ ಸಂಪಾದನೆ ಪಾಠಾಂತರಗಳಿಗೆ ಪ್ರತ್ಯೇಕ ‘ಪಾಠಾಂತರ ಬ್ಯಾಂಕ್’ ಮಾಡಿ ಪ್ರಸಿದ್ಧ ಪಠ್ಯವನ್ನು ಮಾತ್ರ ಮುದ್ರಿಸಿದ್ದರು. ಅವರು ಶೈಕ್ಷಣಿಕ ಕೆಲಸಗಳಿಗೆ ಮೈಸೂರಿಗೆ ಬಂದಾಗ ಅತಿಥಿಗೃಹದಲ್ಲಿರುತ್ತಿದ್ದರು. ‘ಏನೋ?’ ಎಂಬ ಅವರ ಜವಾರಿ ವಿಚಾರಣೆಯ ಮಾತು, ಬಾ ಅತಿಥಿ ಗೃಹಕ್ಕೆ ಎಂಬ ಕರೆ.ಅಲ್ಲಿ ಹೋದರೆ ರೂಲು ಹಾಕಿದ ಎ3 ಸೈಜಿನ ಪೇಪರನ್ನು ಬೈಂಡ್ ಮಾಡಿಸಿ ಕೊಂಡ ಬುಕ್ಕಿನಲ್ಲಿ ಸದಾ ಅವರು ಸಂಶೋಧನಾ ಲೇಖನಗಳನ್ನು ಬರೆಯುತ್ತಲೇ ಇರುತ್ತಿದ್ದರು. ಬದುಕಿನುದ್ದಕ್ಕೆ ಕ್ಷಣವೊಂದನ್ನೂ ವ್ಯರ್ಥಮಾಡದೆ ಸಂಶೋಧನೆಯಲ್ಲಿ ತೊಡಗಿದ್ದ ಸಂಶೋಧಕರು ಅವರಾಗಿದ್ದರು.
ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ನಾನು 11ವಿದ್ಯಾರ್ಥಿಗಳನ್ನು ಪಿ.ಎಚ್‌ಡಿ., ವ್ಯಾಸಂಗ ಮಾಡಿಸಲು ತುಮಕೂರಿನಿಂದ ಹಂಪಿಗೆ ಕರೆದೊಯ್ದಿದ್ದೆ. ಡಾ. ಮಲ್ಲೇಪುರಂ ಕುಲಸಚಿವರಾಗಿದ್ದರು. ಭೇಟಿಗೆ ಹೋದಾಗ ನಮಸ್ಕಾರ ಎಂದು ಕೊನೆಯ ಕುರ್ಚಿಯಲ್ಲಿ ಕುಳಿತಿದ್ದೆ. ‘ಬಾರಾ’ ಎಂದು ಮೊದಲ ಕುರ್ಚಿಯಲ್ಲಿ ಕೂರಲು ಕೈತೋರಿಸಿ ‘ನಾಳೆ ನೀನು ಇದೇ ಕುರ್ಚೀಲಿ ಕೂರಂಗೆ ಆಗಬಹುದು ಬಾರಾ’ ಎಂದು ಕರೆದರು. ನನ್ನ ಬಗ್ಗೆ ಅವರಿಗಿದ್ದ ಭರವಸೆಯ ಬಗ್ಗೆ ನನಗೆ ಸದಾ ಹೆಮ್ಮೆ ಎನಿಸುತ್ತದೆ. ಬೆಳಗಾವಿಯಲ್ಲಿ ನಾನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕನಾಗಿದ್ದಾಗ ಅವರು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಪ್ರತೀ ಕಾರ್ಯಕ್ರಮದಲ್ಲಿ ನಾನು ನನ್ನ ವಿದ್ಯಾರ್ಥಿಗಳೊಂದಿಗೆ ತಪ್ಪದೆ ಹಾಜರಾಗುತ್ತಿದ್ದೆ. ಪಠ್ಯಪುಸ್ತಕ ಸಿದ್ಧತೆಗಾಗಿ, ನಾಟಕ ಅಥವಾ ಇನ್ಯಾವುದೇ ಕೆಲಸಕ್ಕ್ಕೊ ಧಾರವಾಡಕ್ಕೆ ಹೋದಾಗ ತಪ್ಪದೆ ‘ಸೌಜನ್ಯ’ ಮನೆಗೆ ಹೋಗಿ ಬರುತ್ತಿದ್ದೆ. ಆ ಸಮಯದಲ್ಲಿ ನಾನು ಕವಿರಾಜಮಾರ್ಗದ ಸಂಶೋಧನೆ ಕೈಗೊಂಡಾಗ ತುಂಬಾ ಖುಷಿ ಪಟ್ಟವರಲ್ಲಿ ಅವರು ಮೊದಲಿಗರು.
ಕವಿರಾಜ ಮಾರ್ಗದಿಂದಿಡಿದು ನವೋದಯ ಪೂರ್ವದ ವರೆಗಿನ ಸಾಹಿತ್ಯ ಕುರಿತ ಸಂಶೋಧನೆಯಲ್ಲಿ ಅವರು ನಿಷ್ಣಾತರು. ಸಿರುಮಣ ಸಾಂಗತ್ಯಗಳ ಅವರ ಸಂಪಾದನೆ, ವೀರಭದ್ರನ ಕುರಿತ ಸಂಶೋಧನೆ, ಕೊಂಡಗುಳಿ ಕೇಶಿರಾಜನ ಕೃತಿಗಳು, ಅಣ್ಣಿಗೇರಿ ತಲೆಬುರುಡೆಗಳ ಕುರಿತ ಅವರ ಸಂಶೋಧನೆಗಳು ಮುಖ್ಯವಾದವು.
ವಚನ ಸಾಹಿತ್ಯ ಮತ್ತು ಅದರ ಸಂಪಾದನೆಗೆ ಅವರ ಕೊಡುಗೆ ಅಪಾರವಾದುದು. ಬೈಬಲ್ ಮಾದರಿಯ ವಚನಸಂಪುಟ ಅವರ ಮಹತ್ವದ ಕೃತಿ. ಅದರ ಪ್ರೂಫ್ ಹಾಕಿ ಅಂತ್ಯಗೊಳಿಸುತ್ತಿದ್ದಾಗ, ನಾನು ಅವರ ಮನೆಗೆ ಹೋದಾಗ ‘ಈ ತರ ಮಾಡಿದ್ದೇನೆ ಕಣ ಹ..ಹ..ಏನನಿಸ್ತದ?’ ಅಂತ ಕೇಳಿದ್ದರು. ‘ವಚನ ಕಮ್ಮಟ’(ಮರುಳಸಿದ್ದಪ್ಪ ಕೆ. ಮತ್ತು ಕೀ.ರಂ. ನಾಗರಾಜರು ಸಂಪಾದಿತ ಕೃತಿ) ಬಿಟ್ಟರೆ ಮತ್ತೊಂದು ಮಹತ್ವದ ಕೃತಿ ಬೈಬಲ್ ವಚನ ಸಂಪುಟ. ಅದನ್ನು ನಮಗಿತ್ತು ಗನ್ ಪಾಯಿಂಟ್‌ಗೆ ತಮ್ಮ ಹಣೆಯೊಡ್ಡಿದ ಕಲಬುರ್ಗಿ ಮಾಸ್ತರು ತಮ್ಮದೇ ಆದ ಶಿಷ್ಯ ಪರಂಪರೆಯನ್ನು ನಿರ್ಮಿಸಿ ಹೋಗಿದ್ದಾರೆ. ಅದು ಅದ್ಭುತವಾದ ಶಿಷ್ಯ ಪರಂಪರೆ.
ನನ್ನೆದುರಿಗೆ ‘ಮಹಾಮಾರ್ಗ’ (ಸಂ: ಡಾ. ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ) ಮತ್ತು ‘ನಾವು ಕಂಡಂತೆ ಡಾ ಎಂ.ಎಂ. ಕಲಬುರ್ಗಿ (ಸಂ. ಡಾ. ಗುರುಪಾದ ಮರಿಗುದ್ದಿ, ಡಾ. ಹನುಮಂತ ಮೇಲಿನಮನಿ) 58 ಜನ ವಿದ್ವಾಂಸರ ಬರಹಗಳಲ್ಲಿ ಕಲಬುರ್ಗಿ ಅಂದರೆ ಯಾರು? ಎಂಬುದನ್ನು ಕಟ್ಟಿಕೊಟ್ಟರೆ ಮೊದಲಿನ ಕೃತಿ ಅವರ ಅಭಿನಂದನಾ ಗ್ರಂಥ. ಅದೊಂದು ಹೆಚ್ಚೊತ್ತಿಗೆ. ಸಂಶೋಧನೆ ಕುರಿತ ಷಣ್ಮುಖ ಕೃತಿ ಅದಾಗಿದೆ. 1. ಸಂಶೋಧನೆ ವಿಧಾನ, 2. ಸಂಶೋಧನೆ ಪರಂಪರೆ, 3 ಎಂ.ಎಂ. ಕಲಬುರ್ಗಿಯವರ ಕೊಡುಗೆ, 4. ಎಂ.ಎಂ. ಕಲಬುರ್ಗಿಯವರ ಕೃತಿಗಳು, 5. ಎಂ.ಎಂ. ಕಲಬುರ್ಗಿಯವರ ಹೆಜ್ಜೆ ಗುರುತುಗಳು, 6. ಪಿಎಚ್.ಡಿ. ಪ್ರಬಂಧಗಳ ಸೂಚಿ ಇದು ಸಂಶೋಧನೆಯ ಆಕರ. ಇಂಥ ಕೃತಿಗಳಲ್ಲಿ ಕಲಬುರ್ಗಿಯವರು ಸದಾ ಜೀವಂತವಾಗಿದ್ದಾರೆ.
ಡಾ. ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ 7 ವರ್ಷಗಳು ಕಳೆದವು. (30.8.2015 ಗತಿಸಿದ ದಿನ. ಧಾರವಾಡದ ಅವರ ಮನೆಯಲ್ಲಿ) ಮಲ್ಲೇಶಪ್ಪಮಡಿವಾಳಪ್ಪ ಕಲಬುರ್ಗಿ ಅವರು 28.11.1938ರಲ್ಲಿ ಯಾರ್ಗಲ್ಲಿನಲ್ಲಿ ಜನಿಸಿದವರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕಲಿತು ಅದೇ ವಿಶ್ವವಿದ್ಯಾ ನಿಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಗಳಾಗಿ, ಗದುಗಿನ ತೋಂಟದಾರ್ಯ ಮಠದ ಪ್ರಕಟಣೆಗಳಿಗೆ, ಸಾಹಿತ್ಯ, ಸಾಂಸ್ಕೃತಿಕ ಕೆಲಸಗಳಿಗೆ ಅನೇಕ ಸಂಸ್ಥೆ ಮತ್ತು ಮಠಗಳಿಗೆ ಒತ್ತಾಸೆಯಾಗಿ ನಿರಂತರ ಕೆಲಸ ಮಾಡಿದವರು. ವಚನ ಸಾಹಿತ್ಯ, ಪ್ರಾಚೀನ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯದ ಬಗ್ಗೆ ಅಧಿಕೃತವಾದ ಕೆಲಸ ಮಾಡಿದ ವಿದ್ವಾಂಸರು ಅವರಾಗಿದ್ದರು. ನನ್ನ ಸಂಶೋಧನೆಯ ಮೇಲೆ ಅಪಾರ ಪ್ರಭಾವ ಬೀರಿದ್ದ ಅವರು ನನ್ನಂಥ ಕಿರಿಯರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ - ನಮ್ಮ ಸಂಶೋಧನಾ ಮಾದರಿ ಭಿನ್ನವಾಗಿದ್ದರೂ ಅವರ ಅಭಿಪ್ರಾಯಗಳನ್ನು ನಾವು ಸುಲಭವಾಗಿ ಅಲ್ಲಗಳೆಯುವಂತಿರಲಿಲ್ಲ. ಕನ್ನಡಕ್ಕಾಗಿ, ವಿದ್ವತ್‌ವಲಯಕ್ಕಾಗಿ ತಮ್ಮ ಪ್ರಾಣತೆತ್ತ ಡಾ. ಕಲಬುರ್ಗಿ ಅವರ ನೆನಪು ಸದಾ ಜೀವಂತವಾಗಿರುತ್ತದೆ.







