ನಿನ್ನೆ ಬಂದಿದ್ದರೆ ಹೆದ್ದಾರಿಯಲ್ಲೇ ಈಜಾಡಬಹುದಿತ್ತು: ಸಂಸದ ಪ್ರತಾಪ್ ಸಿಂಹರನ್ನು ಕುಟುಕಿದ ಕುಮಾರಸ್ವಾಮಿ

ರಾಮನಗರ, ಆ.30: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿ ಅತ್ಯುತ್ತಮವಾಗಿದೆ ಎಂದು ಹೇಳಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಚಲಿಸುತ್ತಿದ್ದ ಕಾರಿನ ಮೇಲೆ ಆಲದಮರ ಉಳುಳಿಬಿದ್ದ ಪರಿಣಾಮ ಸಾವನ್ನಪ್ಪಿದ್ದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು.
ಉತ್ತಮವಾದ ಕೆಲಸ ಏನಾಗಿದೆ ಎಂಬುದನ್ನು ಪ್ರತಾಪಸಿಂಹ ಬಂದು ನೋಡಲಿ. ಅವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರಲ್ಲ, ಅವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೊ ತೆಗೆಸಿಕೊಂಡಿದ್ದರು. ಬಿಡದಿ ಬಳಿ ಬಂದು ಅಧಿಕಾರಿಗಳ ಸಭೆ ಮಾಡಿದ್ದರು. ಇಲ್ಲಿಯೇ ಬಂದು ಮಧ್ಯಸ್ಥಿಕೆ ವಹಿಸಿದ್ದರಲ್ಲ, ಈಗ ಬಂದು ನೋಡಲಿ, ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಭಾರೀ ಮಳೆಗೆ ಬಾಲಕಿ ಸೇರಿ ಐದು ಮಂದಿ ಮೃತ್ಯು
ನಿನ್ನೆ ಅವರು ಸಂಗಬಸಪ್ಪನದೊಡ್ಡಿ ಹೆದ್ದಾರಿಗೆ ಬಂದಿದ್ದರೆ ಸ್ವತಃ ಸ್ವಿಮ್ ಮಾಡಬಹುದಿತ್ತು. ಚೆನ್ನಾಗಿ ನೀರು ನಿಂತಿತ್ತು. ವಾಹನಗಳು ಸಂಚಾರ ಮಾಡಲಿಕ್ಕೆ ರಸ್ತೆ ಮಾಡಿ ಅಂದರೆ ಹೆದ್ದಾರಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಕಣ್ಣಿದ್ದರೆ ಬಂದು ನೋಡಲಿ ಎಂದು ಕಿಡಿಕಾರಿದರು.
ಕೆರೆ ಒಡೆದಿದ್ದರಿಂದ ಈ ರೀತಿ ಪ್ರವಾಹ ಆಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತನಾಡುವುದಲ್ಲ. ಶಾಶ್ವತವಾದ ಕೆಲಸ ಆಗಬೇಕು. ಸರ್ಟಿಫಿಕೇಟ್ ಕೊಡೋದಕ್ಕಲ್ಲ ಇವರು ಇರುವುದು. ಕಾಮಗಾರಿ ತಪ್ಪಾಗಿದ್ದರೆ ಸರಿಪಡಿಸಬೇಕು. ಪ್ರತಾಪ್ ಸಿಂಹ ಬರೀ ಪ್ರಚಾರ ತೆಗೆದುಕೊಳ್ಳೋದು ನಿಲ್ಲಿಸಲಿ. ಮೊದಲು ಜನರ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಐದು ಲಕ್ಷ ರೂ. ನೆರವು
ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿಬಿದ್ದು ಸಾವನ್ನಪ್ಪಿದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಐದು ಲಕ್ಷ ರೂಪಾಯಿಯ ನೆರವಿನ ಚೆಕ್ ಹಸ್ತಾಂತರ ಮಾಡಿದರು.
ಮಾಗಡಿ ಶಾಸಕ ಮಂಜುನಾಥ್, ಮತ್ತಿತರರು ಮಾಜಿ ಮುಖ್ಯಮಂತ್ರಿಯ ಜತೆಯಲ್ಲಿದ್ದರು.