ತುಮಕೂರು: ಚಡ್ಡಿಯಲ್ಲಿ ಮೂತ್ರ ಮಾಡುತ್ತಿದ್ದ ಎಂದು ಬಾಲಕನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಅಂಗನವಾಡಿ ಶಿಕ್ಷಕಿ!

ತುಮಕೂರು, ಆ.30: ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಎಂದು ಮೂರು ವರ್ಷದ ವಿದ್ಯಾರ್ಥಿಯನ್ನು ಗದರಿಸಲು ಅಂಗನವಾಡಿ ಕೇಂದ್ರದ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗವನ್ನು ಬೆಂಕಿ ಕಡ್ಡಿಯಿಂದ ಸುಟ್ಟಿರುವ ಪ್ರಕರಣ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ವರದಿಯಾಗಿದೆ.
ಅಂಗನವಾಡಿಯಲ್ಲಿ ಪದೆ ಪದೇ ಮೂತ್ರ ಮತ್ತು ಶೌಚವನ್ನು ಮಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಬೆದರಿಸಲು, ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೆಂಕಿಕಡ್ಡಿ ಗೀರಿದ್ದು, ಚಡ್ಡಿ ಹಾಕದೇ ಕುಳಿತುಕೊಂಡಿದ್ದ ಬಾಲಕ ಗುಪ್ತಾಂಗಕ್ಕೆ ತಗುಲಿ, ಗಾಯವಾಗಿದೆ ಎಂದು ಹೇಳಲಾಗಿದೆ. ಬಳಿಕ ಮನೆಗೆ ಹೋದಾಗ ಬಾಲಕನನ್ನು ಗಮನಿಸಿದ ಅಜ್ಜಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಭಾರೀ ಮಳೆಗೆ ಬಾಲಕಿ ಸೇರಿ ಐದು ಮಂದಿ ಮೃತ್ಯು
ಈ ಘಟನೆ ಗೊತ್ತಾಗುತ್ತಲೇ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಮಕ್ಕಳು, ಶಿಕ್ಷಕಿ, ಸಹಾಯಕಿ ಮತ್ತು ಬಾಲಕನ ಪೋಷಕರ ಹೇಳಿಕೆ ಪಡೆದಿದ್ದಾರೆ. ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ನೋಟಿಸ್ ನೀಡಿ ತಪ್ಪೋಪ್ಪಿಗೆ ಪತ್ರ ಪಡೆದಿದ್ದಾರೆ.







