ಪ್ರಧಾನಿ ಮೋದಿ ಮಂಗಳೂರು ಭೇಟಿ ಕಾರ್ಯಕ್ರಮದ ಸಮಯ ಬದಲಾವಣೆ
ಜನರು ಪೂರ್ವಾಹ್ನ 11:30ರೊಳಗಾಗಿ ಸಭಾ ಮೈದಾನ ತಲುಪಬೇಕಿದೆ: ಸುದರ್ಶನ್ ಮೂಡುಬಿದಿರೆ

ಮಂಗಳೂರು, ಆ.30: ಪ್ರಧಾನಮಂತ್ರಿ (Prime Minister) ನರೇಂದ್ರ ಮೋದಿ (Narendra Modi) ಸೆಪ್ಟಂಬರ್ 2ರಂದು ಮಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮದ ಸಮಯ ಬದಲಾವಣೆ ಆಗಿದೆ. ಮಧ್ಯಾಹ್ನ 1:15ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 'ಈ ಮೊದಲು ಪ್ರಧಾನಿ ಮೋದಿ ಕಾರ್ಯಕ್ರಮ ಸಂಜೆ 4 ಗಂಟೆಗೆ ನಿಗದಿಯಾಗಿತ್ತು. ಆದರೆ ಬದಲಾದ ಸಮಯದಂತೆ ಪ್ರಧಾನಿ ಮಧ್ಯಾಹ್ನ ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1 ಗಂಟೆಗೆ ನವ ಮಂಗಳೂರು ಬಂದರು ಪ್ರಾಧಿಕಾರ(ಎನ್.ಎಂ.ಪಿ.ಎ.)ಕ್ಕೆ ಭೇಟಿ ನೀಡುವರು. ಅಲ್ಲಿಂದ ರಸ್ತೆ ಮಾರ್ಗವಾಗಿ ಸಭಾ ಕಾರ್ಯಕ್ರಮ ನಡೆಯುವ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸುವರು ಎಂದರು.
ಕಾರ್ಯಕ್ರಮದ ಸಮಯ ಬದಲಾವಣೆ ಆಗಿರುವುದರಿಂದ ಜನರು ಪೂರ್ವಾಹ್ನ 11:30ರ ಒಳಗಾಗಿ ಸಭಾ ಮೈದಾನ ತಲುಪಬೇಕಿದೆ. ಜಿಲ್ಲಾಡಳಿತದಿಂದ ಉಪಾಹಾರ ವ್ಯವಸ್ಥೆ ಇರಲಿದೆ. ಕಾರ್ಯಕ್ರಮ ಮುಗಿದ ಮೇಲೆ ಪಕ್ಷದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುವುದು. ವಾಹನಗಳಿಗೆ ಊಟದ ಪ್ಯಾಕೆಟ್ ತಲುಪಿಸಲು ಯೋಚಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರಧಾನಿಯವರನ್ನು ಸ್ವಾಗತಿಸಲು ದಕ್ಷಿಣ ಕನ್ನಡ ಜಿಲ್ಲೆ ಸಜ್ಜುಗೊಂಡಿದೆ. ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಯೋಜನೆಗಳ 70 ಸಾವಿರಕ್ಕೂ ಅಧಿಕ ಫಲಾನುಭವಿಗಳನ್ನು ಸೇರಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸೇರಿದಂತೆ ಒಟ್ಟು 2 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.







