ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಿಗದ ನ್ಯಾಯ;ಸರಕಾರದ ತಾರತಮ್ಯ ನೀತಿ ವಿರುದ್ಧ ಪ್ರಧಾನಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿ
► ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆ ಆಗ್ರಹ ► ಸೆ.9ರಂದು ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ

ಮಂಗಳೂರು, ಆ.30: ಮಂಗಳಪೇಟೆಯ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ತಾರತಮ್ಯ ಎಸಗಿದೆ. ಸೆ.2ರಂದು ಮಂಗಳೂರಿಗೆ ಬರಲಿರುವ ಪ್ರಧಾನಿಗೆ ರಾಜ್ಯ ಸರಕಾರದ ತಾರತಮ್ಯ ನೀತಿಯ ಬಗ್ಗೆ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಜಾತಿ ಮತ್ತು ರಾಜಕೀಯ ತಾರತಮ್ಯ ಮಾಡಿದೆ. ಹತ್ಯೆಗೀಡಾದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡಿದೆ. ಆದರೆ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸರಕಾರ ಪರಿಹಾರದ ಮೊತ್ತ ನೀಡಿಲ್ಲ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮಸೂದ್, ಫಾಝಿಲ್ ಮನೆಗೆ ಭೇಟಿ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಅವರು ಆಶ್ವಾಸನೆ ಈಡೇರಿಸಿಲ್ಲ. ಅಲ್ಲದೆ ಸಚಿವರು, ಶಾಸಕರು ಕೂಡ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಪ್ರವೀಣ್ ಹತ್ಯೆಗೆ ಸಂಬಂಧಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಮಸೂದ್ ಮತ್ತು ಫಾಝಿಲ್ ಪ್ರಕರಣಕ್ಕೆ ಸಂಬಂಧಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ, ಎನ್‌ಐಎಗೂ ತನಿಖೆಯನ್ನು ಹಸ್ತಾಂತರಿಸಿಲ್ಲ. ಸರಕಾರದ ಈ ತಾರತಮ್ಯವನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಳ್ಳಲು ಮುಸ್ಲಿಂ ಐಕ್ಯತಾ ವೇದಿಕೆ ಬಯಸಿದೆ. ಹಾಗಾಗಿ ಜಿಲ್ಲಾಡಳಿತ ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.
ಸರಕಾರದ ಈ ದ್ವಂದ ನಿಲುವನ್ನು ಖಂಡಿಸಿ ಸೆ.9ರಂದು ಅಪರಾಹ್ನ 3ಕ್ಕೆ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಉಮರ್ ಫಾರೂಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಬದ್ರಿಯಾ, ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅದ್ದು, ಕಾರ್ಯದರ್ಶಿ ಕೆ. ಶರೀಫ್, ಹಸನಬ್ಬ ಬಾಳ, ಅಬೂಬಕರ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಕರಣ ತನಿಖೆಯ ಹಾದಿ ತಪ್ಪಿದೆ: ಫಾಝಿಲ್ ತಂದೆ ಫಾರೂಕ್
ಮಂಗಳೂರು ನಗರ ಪೊಲೀಸರಿಗೆ ಕೊಲೆ ಪ್ರಕರಣದ ವಾಸ್ತವಾಂಶ ತಿಳಿದಿದೆ. ಆದರೆ ರಾಜಕೀಯ ಶಕ್ತಿಗಳು ಪೊಲೀಸರ ತನಿಖೆಗೆ ಅಡ್ಡಿಯಾಗಿದೆ. ಇದರಿಂದ ಈ ಪ್ರಕರಣದ ತನಿಖೆಯು ಹಾದಿ ತಪ್ಪಿದೆ ಎಂದು ಫಾಝಿಲ್‌ನ ತಂದೆ ಫಾರೂಕ್ ಹೇಳಿದ್ದಾರೆ.
ಪೊಲೀಸರು ಕೇವಲ ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅದರಿಂದಾಚೆಗೆ ಅವರ ತನಿಖೆ ಸಾಗಿಲ್ಲ. ಇದರ ನೈಜ ಸೂತ್ರಧಾರ ಯಾರು ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಪ್ರಮುಖ ಸಾಕ್ಷಿದಾರರನ್ನು ಕೂಡ ಪೊಲೀಸರು ಕೈ ಬಿಟ್ಟಿದ್ದಾರೆ. ಬಿ.ಸಿ.ರೋಡ್ ಸಮೀಪದ ಪಲ್ಲಮಜಲಿನ ವ್ಯಕ್ತಿಯನ್ನು ಈ ಪ್ರಕರಣದ ಸೂತ್ರಧಾರ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಕೊಲೆಯಾದ ನನ್ನ ಮಗ ಫಾಝಿಲ್‌ಗೂ ಆ ಸೂತ್ರಧಾರನಿಗೂ ಏನು ಸಂಬಂಧ? ಯಾವ ವಿಷಯದಲ್ಲಿ ಅವರ ಮಧ್ಯೆ ವೈಷಮ್ಯವಿತ್ತು? ಇದು ರಾಜಕೀಯಕ್ಕಾಗಿ ನಡೆದ ಕೊಲೆಯಾಗಿದೆ. ನೈಜ ಕೊಲೆಗಾರರನ್ನು ಮತ್ತದರ ಹಿಂದಿರುವ ಸೂತ್ರಧಾರರನ್ನು ಕೈ ಬಿಟ್ಟರೆ ಮುಂದೆ ಅವರಿಂದ ಮತ್ತಷ್ಟು ಕೊಲೆಗಳಾಗುವ ಅಪಾಯವಿದೆ ಎಂದು ಫಾರೂಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕೃತ್ಯಕ್ಕೆ ಬಳಸಿದ ವಾಹನಗಳ ನೈಜ ಮಾಲಕರು ಯಾರು? 25 ವರ್ಷದ ಹಿಂದಿನ ವಾಹನದಲ್ಲಿ ಕಾಪು ಸಮೀಪದ ಇನ್ನಾದಿಂದ ಬಿ.ಸಿ.ರೋಡ್‌ನ ಪಲ್ಲಮಜಲಿಗೆ ಹೋಗಲು ಸಾಧ್ಯವೇ? ಪೊಲೀಸರು ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನೈಜ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಫಾರೂಕ್ ಒತ್ತಾಯಿಸಿದ್ದಾರೆ.