ಜನರ ನಡುವೆ ವೈಮನಸ್ಸು ಹುಟ್ಟಿಸುವುದೇ ಬಿಜೆಪಿಯ ನಿತ್ಯ ಕಾಯಕ: ಯು.ಟಿ.ಖಾದರ್ ಆರೋಪ

ಪುತ್ತುರು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ ಜನಸಾಮಾನ್ಯರ ಕಷ್ಟ ಮತ್ತು ನೋವುಗಳು ಹೆಚ್ಚಾಗಿದ್ದು, ಜನರ ನಡುವೆ ವೈಮನಸ್ಸು ಹುಟ್ಟಿಸುವುದೇ ಬಿಜೆಪಿಯ ನಿತ್ಯ ಕಾಯಕವಾಗಿದೆ ಎಂದು ರಾಜ್ಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ಆರೋಪಿಸಿದರು.
ಅವರು ಮಂಗಳವಾರ ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸದೆ ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದು ದುರಂತವಾಗಿದೆ. ಅತಿವೃಷ್ಠಿಯಿಂದಾಗಿ ನಷ್ಟ ಸಂಭವಿಸಿದವರಿಗೆ ಸರ್ಕಾರ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ರಸ್ತೆಗಳು ಹದೆಗೆಟ್ಟಿದ್ದು, ಕಡಲ್ಕೊರೆತಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಯಿಂದಾಗಿ ಕೃಷಿಗಳಿಗೆ ಹಾನಿಯಾಗಿದ್ದರೂ ಈ ತನಕ ಶಾಸಕರುಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಒಂದು ಜೊತೆ ಮಾತ್ರ ಸಮವಸ್ತ್ರ ನೀಡಲಾಗಿದೆ. ಅಕ್ಷರ ದಾಸೋಹದಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಲಾಗುತ್ತಿಲ್ಲ. ಕಾಲೇಜ್‍ಗಳಲ್ಲಿನ ಉಪನ್ಯಾಸಕರ ಸಾಮೂಹಿಕ ವರ್ಗಾವಣೆಗಳಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗುತ್ತಿದೆ. ವಿದ್ಯಾವಂತರಿಗೆ ಸಮರ್ಪಕ ಉದ್ಯೋಗ ವಂಚನೆಯಾಗುತ್ತಿದೆ.
ಗ್ಯಾಸ್, ಪೆಟ್ರೋಲ್, ಅಗತ್ಯ ವಸ್ತುಗಳ, ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಕನಿಷ್ಟ ವೇತನ ಪಾವತಿ ಮಾಡುತ್ತಿತ್ತು. ಇದೀಗ ಬಿಜೆಪಿ ಸರ್ಕಾರ ವೇತನದಲ್ಲಿ ಶೇ. 30 ಕಡಿತ ಮಾಡಿ ಪಾವತಿ ಮಾಡುತ್ತಿದೆ. ಬಿಜೆಪಿಯ ಇಂತಹ ಆಡಳಿತ ವೈಫಲ್ಯಗಳಿಂದಾಗಿ ಜನಸಾಮಾನ್ಯರು, ನೌಕರರು ಬೇಸತ್ತಿದ್ದಾರೆ. ಅಲ್ಲದೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗುತ್ತಿಗೆದಾರರು ಶೆ. 40 ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರದಾನಿಗಳು ಯಾವುದೇ ತನಿಖೆ ನಡೆಸಿಲ್ಲ. ಪತ್ರಕ್ಕೆ ಉತ್ತರವನ್ನೂ ನೀಡಿಲ್ಲ ಎಂದು ಹೇಳಿದರು.
ಪುತ್ತೂರಿನಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ ಮೆಕಡಿಲ್ ಕಾಲೇಜ್‍ಗೆ ಮೀಸಲಾಗಿರಿಸಿದ್ದ ಜಾಗದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸೀಫುಡ್ ಪಾರ್ಕ್ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ತನಕ ಯಾವುದೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿಲ್ಲ. ಈ ಬಗ್ಗೆ ಶಾಸಕರು ಜನರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ತಪ್ಪುಗಳು ಪ್ರತಿಪಕ್ಷಗಳು ಹೋರಾಟ ನಡೆಸಿಯೇ ಎಚ್ಚರಿಸಿ ಸರಿಪಡಿಸಬೇಕಾಗಿಲ್ಲ. ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇರಬೇಕು. ನಮ್ಮಲ್ಲಿ ಕೋವಿಡ್‍ಗೆ ಲಸಿಕೆ ನೀಡಬೇಕಾದರೆ ಸರ್ಕಾರವನ್ನು ನ್ಯಾಯಾಲಯ ಎಚ್ಚರಿಸಬೇಕಾಯಿತು. ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ ಉಪಸ್ಥಿತರಿದ್ದರು.







