ಎನ್ಎಂಪಿಎ ಆವರಣದಲ್ಲಿ 4 ಸಾವಿರ ಕೋಟಿ ರೂ.ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ: ವಿ.ಕೃಷ್ಣಪ್ಪ ಪೂಜಾರಿ

ಪ್ರಧಾನಿ ನರೇಂದ್ರ ಮೋದಿ
ಮಂಗಳೂರು; ‘ನವಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಆವರಣದಲ್ಲಿ ನಾಲ್ಕು ಸಾವಿರ ಕೋಟಿ ರೂ ಮೊತ್ತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆ. 2ರಂದು ಚಾಲನೆ ನೀಡಲಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯ ವಿ.ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಸಂಸದ ನಳಿನ್ ಕುಮಾರ್ ಕಟೀಲ್ ಅವರು 2009ರಿಂದ 2014ರವರೆಗೆ 4 ಸಾವಿರ ಕೋಟಿ ಹಾಗೂ 2014ರಿಂದ 2019ರವರೆಗೆ 16,520 ಕೋಟಿ ಅನುದಾನವನ್ನು ಜಿಲ್ಲೆಗೆ ತಂದಿದ್ದಾರೆ.ಈ ಅವಧಿಯಲ್ಲಿ 296.91 ಕೋಟಿ ಅನುದಾನದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಮಂಗಳೂರು– ಕೊಚ್ಚಿ ಅನಿಲ ಪೂರೈಕೆ ಕೊಳವೆ ಅಳವಡಿಸುವ 3000 ಕೋಟಿ ಮೊತ್ತದ ಯೋಜನೆ ಕಾರ್ಯಗತಗೊಂಡಿದೆ’ ಎಂದರು.
‘ಕುಲಶೇಖರದಿಂದ ಬೆಳುವಾಯಿ, ಬಿ.ಸಿ.ರೋಡ್ನಿಂದ ಚಾರ್ಮಾಡಿ, ಬಿ.ಸಿ.ರೋಡ್ನಿಂದ ಅಡ್ಡಹೊಳೆವರೆಗಿನ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಕಾರ್ಯಗತ ಆಗುತ್ತಿವೆ. ಹೊಸ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಕಲ್ಲಡ್ಕವನ್ನು ಹೈಟೆಕ್ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆಯನ್ನೂ ನಿರ್ಮಿಸಲಾಗುತ್ತಿದೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬಳ್ಪ ಗ್ರಾಮದಲ್ಲಿ 60 ಕೋಟಿಯ ವಿವಿಧ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ’ ಎಂದರು.
ವಿವಿಧ ಸರಕಾರಿ ಯೋಜನೆಗಳ ಸಾವಿರಾರು ಫಲಾನುಭವಿಗಳು ಬಂಗ್ರಕೂಳೂರಿನಲ್ಲಿ ಸೆ. 2ರಂದು ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
ಟೋಲ್ ಸಂಗ್ರಹಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕೈದು ತಿಂಗಳು ಗುಂಡಿ ಬಿದ್ದರೂ ಮುಚ್ಚದೇ, ಪ್ರಧಾನಿ ಆಗಮನದ ಸಂದರ್ಭದಲ್ಲಿ ದಿಡೀರ್ ದುರಸ್ತಿಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಳೆಯಿಂದಾಗಿ ಸಮಸ್ಯೆ ಆಗಿದ್ದು ನಿಜ. ಇನ್ನೊಂದು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ. ಸುರತ್ಕಲ್ ಟೋಲ್ ಪ್ಲಾಝಾ ರದ್ಧತಿಗೂ ಕ್ರಮಕೈಗೊಳ್ಳಲಾಗಿದೆ’ ಎಂದರು.
ದಿಶಾ ಸಮಿತಿ ಸದಸ್ಯರಾದ ಜಯಶ್ರೀ ಕುಲಾಲ್, ರಾಮದಾಸ್ ಹಾರಾಡಿ, ರಘುರಾಮ ಮುಗೇರ ಪುನರೂರು, ಬಿಜೆಪಿ ಒಬಿಸಿ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಇದ್ದರು.
‘ಕಲ್ಲಡ್ಕ ಬಳಿ ನಡೆಯುತ್ತಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿರು ವುದರಿಂದ ಸಾರ್ವಜನಿಕರಿಗೆ ಅನನುಕೂಲ ಆಗುತ್ತಿರುವುದು ನಿಜ. ಇನ್ನು ಮೂರು ತಿಂಗಳು ಈ ಸಮಸ್ಯೆಯನ್ನು ಸಹಿಸಿಕೊಳ್ಳಬೇಕು. ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಇಂತಹ ಸಮಸ್ಯೆ ಸಹಜ’ ಎಂದು ಕೃಷ್ಣಪ್ಪ ತಿಳಿಸಿದರು.