ಮಂಗಳೂರು: ‘ರಸ್ತೆ ಗುಂಡಿ’ ಹುಡುಕುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಾರ್ಟ್ ಸಿಟಿ ಮಾದರಿ ರಸ್ತೆ, ಗುಂಡಿ ಹುಡುಕುವ ಸ್ಪರ್ಧೆಯ ಫಲಿತಾಂಶ ಮಂಗಳವಾರ ಮಹಾನಗರ ಪಾಲಿಕೆಯ ಮುಂದೆ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು.
ನಗರದ ಅಪಾಯಕಾರಿ ಮತ್ತು ಮಾನವ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಗುಂಡಿಗಳನ್ನು ಗುರುತಿಸುವ ಸಲುವಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಆ.23ರಿಂದ 29ರ ಮಧ್ಯೆ ಸಾರ್ವಜನಿಕರು ಕ್ಲಿಕ್ಕಿಸಿದ ಫೋಟೊಗಳನ್ನು ಪರಿಗಣಿಸಲಾಗಿತ್ತು.
ಸ್ಪರ್ಧೆಯಲ್ಲಿ 1211 ಮಂದಿ ಪಾಲ್ಗೊಂಡಿದ್ದರು. ಆ ಪೈಕಿ 30 ಫೋಟೋಗಳನ್ನು ಆಯ್ಕೆ ಮಾಡಿಕೊಂಡ ತೀರ್ಪುಗಾರರಾದ ಮಾರ್ಸೆಲ್ ಮೊಂತೆರೊ, ದೀಕ್ಷಿತ್ ಅತ್ತಾವರ, ಅಝೀಝ್ ಕುದ್ರೋಳಿ, ಮಹೇಶ್ ಕೋಡಿಕಲ್ ಅವರು ಸಂಚಾಲಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತೀರ್ಪು ಪ್ರಕಟಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಶಕ್ತಿನಗರದ ಆಯೋರಾ (ಪ್ರಥಮ-5 ಸಾವಿರ ರೂ.), ಮಣ್ಣಗುಡ್ಡದ ಶ್ರೇಯಾಸ್ ಕಾಮತ್ (ದ್ವಿತೀಯ 3 ಸಾವಿರ ರೂ.). ಮಹಾಕಾಳಿಪಡ್ಪುವಿನ ಕ್ಯಾರನ್ ಲೋಬೋ (ತೃತೀಯ 2 ಸಾವಿರ ರೂ.) ಅವರಿಗೆ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಸಾಲ್ಯಾನ್, ಸಬಿತಾ ಮಿಸ್ಕಿತ್ ಬಹುಮಾನ ವಿತರಿಸಿದರು.
ದ.ಕ.ಜಿಲ್ಲಾ ಬಸ್ ನೌಕರರ ಸಂಘ, ಕಾರು ಮತ್ತು ಟೆಂಪೋ ಚಾಲಕರ ಸಂಘ, ದ್ವಿಚಕ್ರ ಸವಾರರರು ಬಹುಮಾನದ ಮೊತ್ತಕ್ಕೆ ಪ್ರಾಯೋಜಕತ್ವ ನೀಡಿದ್ದರು. ಈ ಸಂದರ್ಭ ಸ್ಪರ್ಧೆಗೆ ಬಂದಿದ್ದ ಗುಂಡಿಗಳ ಫೊಟೋಗಳನ್ನು ಕೂಡ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಐವನ್ ಡಿಸೋಜ ಮಳೆಗಾಲದಲ್ಲಿ ಮೀನುಗಾರಿಕೆಗೆ ನಿಷೇಧವಿದ್ದಂತೆ ರಸ್ತೆ ಅಗೆಯುವುದು ಕಾನೂನಿಗೆ ವಿರುದ್ಧವಾಗಿದೆ. ಈಗಾಗಲೆ ರಸ್ತೆ ಗುಂಡಿಗೆ ಬಿದ್ದು ಹಲವರು ಪ್ರಾಣ ತೆತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿದರೂ ಪಾಲಿಕೆ ನಿರ್ಲಕ್ಷ್ಯ ತಾಳಿದೆ. ಈಗ ಪ್ರಧಾನಿ ಬಂದು ಹೋಗುವ ರಸ್ತೆಯ ದುರಸ್ತಿಯಾಗುತ್ತಿದೆ. ಸರಕಾರದ ಪ್ರಮುಖರು ಬರುವಾಗ ಮಾತ್ರ ರಸ್ತೆ ಗುಂಡಿ ಮುಚ್ಚಿದರೆ ಸಾಕೇ, ಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ಈ ಸ್ಪರ್ಧೆಯಲ್ಲಿ 1211 ಮಂದಿ ಭಾಗವಹಿಸಿದ್ದು. ಜನರ ಆಕ್ರೋಶ ಎಷ್ಟಿದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಬಲ್ಮಠದ ಕಲೆಕ್ಟರೇಟ್ ರಸ್ತೆಯ ಮಧ್ಯೆಯೇ ಅಗೆಯಲಾಗಿದೆ. ಮಂಗಳೂರಿನಲ್ಲಿ ನಗರ ಪಾಲಿಕೆಯ ಆಡಳಿತ ಇದೆಯಾ? ಪಾಲಿಕೆಯ ಆಯುಕ್ತರು-ಉಸ್ತುವಾರಿ ಸಚಿವರು ಇದ್ದಾರಾ? ಗುಂಡಿಯಿಂದ ಬಲಿಯಾದ ಇಂಜಿನಿಯರ್‌ನ ಮನೆಗೆ ಸೌಜನ್ಯಕ್ಕಾದರೂ ತೆರಳಿ ಮಾತನಾಡಿದ್ದಾರಾ?ಎಂದು ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರವಾಗಿ ಈ ಗುಂಡಿಗಳನ್ನು ಮುಚ್ಚದಿದ್ದರೆ ಮೇಯರ್ ಮತ್ತು ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿಯ ಮ್ಯಾನೆಜಿಂಗ್ ಡೈರೆಕ್ಟರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುಧಾಗಿ ಐವನ್ ಡಿಸೋಜ ಎಚ್ಚರಿಕೆ ನೀಡಿದರು.
ಈ ಸಂದರ್ಭ ಚಿತ್ತರಂಜನ್ ಶೆಟ್ಟಿ, ಕೃಷ್ಣ ಆಂಚನ್, ರಮಾನಂದ ಪೂಜಾರಿ, ಸಿದ್ದು ಪೂಜಾರಿ, ಗಣೇಶ್ ಎಕ್ಕೂರು, ಶಶಿ ಪೂಜಾರಿ ಬೋಳಾರ್, ಧನರಾಜ್, ಸತೀಶ್ ಪೆಂಗಲ್, ಜೇಮ್ಸ್ ಪ್ರವೀಣ್, ಮೀನಾ ಟೆಲ್ಲಿಸ್, ಅಶಿತ್ ಪಿರೇರಾ, ವಿಲ್ಪಿಫೆರ್ನಾಂಡಿಸ್, ನಝೀರ್ ಬಜಾಲ್, ಹಸನ್ ಪಳ್ನೀರ್, ಗಂಗಾದರ್ ಯೆಯ್ಯಾದಿ, ಸುರೇಶ್ ಮಲ್ಲಿಕಟ್ಟೆ, ನವೀನ್ ಕಂಕನಾಡಿ, ಪ್ರದೀಪ್ ಕರಾವಳಿ, ಮತ್ತಿತರರು ಉಪಸ್ಥಿತರಿದ್ದರು.











