ಪ್ರಧಾನಿ ಕಾರ್ಯಕ್ರಮದಲ್ಲಿ ಉಡುಪಿಯಿಂದ 20 ಸಾವಿರ ಮಂದಿ: ಸುರೇಶ್ ನಾಯಕ್ ಕುಯಿಲಾಡಿ

ಉಡುಪಿ : ಮಂಗಳೂರಿನಲ್ಲಿ ಸೆ.2ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ಉಡುಪಿ ಜಿಲ್ಲೆಯಿಂದ ಸುಮಾರು 20 ಸಾವಿರ ಮಂದಿ ಭಾಗವಹಿಸಲು ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಮಂಡಲವಾರು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಫಲಾನುಭವಿಗಳ ಸಹಿತ ಎಲ್ಲಾ ಅಪೇಕ್ಷಿತರು ಬೆಳಿಗ್ಗೆ 12 ಗಂಟೆಯೊಳಗೆ ಸಭಾಂಗಣದಲ್ಲಿ ಉಪಸ್ಥಿತರಿರುವಂತೆ ಪೂರ್ವಸಿದ್ಧತೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಂತೆ ವಿನಂತಿಸಲಾಗಿದೆ. ಸಾವರ್ಕರ್ ಹೋರಾಟ, ಜೀವನಾದರ್ಶಗಳ ಮಾಹಿತಿಯನ್ನೊಳ ಗೊಂಡಿರುವ ಪುಸ್ತಕಗಳ ಮಾರಾಟ ಮಳಿಗೆ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕರ್ ಉಪಸ್ಥಿತರಿದ್ದರು.







