ನೆಹರೂ ದೇಶಕ್ಕಾಗಿ ಮಾಡಿದ ತ್ಯಾಗವನ್ನು ಇಂದು ಸರಕಾರವೇ ಅವಮಾನ ಮಾಡುತ್ತಿದೆ: ರಮಾನಾಥ ರೈ ಅಸಮಾಧಾನ
ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ

ಮಂಗಳೂರು: ಜವಾಹರ ಲಾಲ್ ನೆಹರೂ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಇಂದು ಸರಕಾರವೇ ಅವಮಾನ ಮಾಡುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಕಾವೂರು ಜಂಕ್ಷನ್ ನಿಂದ ವಾಮಂಜೂರು ಜಂಕ್ಷನ್ ವರೆಗೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಂದಿರುವ ಸುಧಾರಣೆಗಳಿಂದ ಇಂದು ನಾವೆಲ್ಲರೂ ನೆಮ್ಮದಿಯ ಬದುಕು ಕಾಣುತ್ತಿದ್ದೇವೆ. ಅಕ್ರಮ ಸಕ್ರಮ, ಭೂ ಸುಧಾರಣಾ ಕಾಯ್ದೆಯಿಂದ ಇಂದು ಜನರಿಗೆ ಭೂಮಿ, ಮನೆ ಎಲ್ಲವೂ ಸಿಕ್ಕಿದೆ. ಅವರ ಬಲಿದಾನವನ್ನು ಸ್ಮರಿಸಲು ಸರಕಾರದಿಂದ ಆಗುವುದಿಲ್ಲ ಎಂದಾದರೆ ಸರಕಾರದ ಮನಸ್ಥಿತಿ ಯಾವ ರೀತಿಯದ್ದಾಗಿರಬಹುದು ಎಂದು ಪ್ರಶ್ನಿಸಿದರು.
ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಬೆಳಗ್ಗೆ 10 ಗಂಟೆಗೆ ಕಾವೂರು ಜಂಕ್ಷನ್ ನಿಂದ ಆರಂಭಗೊಂಡ ಸ್ವಾತಂತ್ರ್ಯ ನಡಿಗೆ ಜಾಥಾವು ಮಧ್ಯಾಹ್ನ ವಾಮಂಜೂರು ಜಂಕ್ಷನ್ ನಲ್ಲಿ ಸಮಾಪನಗೊಂಡಿತು.
ವೇದಿಕೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಕೃಪಾ ಅಮರ್ ಆಳ್ವ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಮಹಿಳಾ ಕಾಂಗ್ರೆಸ್ ನ ಶಾಲೆಟ್ ಪಿಂಟೋ, ಕೃಷ್ಣ ಅಮೀನ್, ಲಾರೆನ್ಸ್ ಡಿಸೋಜ, ಕೆಪಿಸಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ಬಿ.ಎ. ಮೊಯ್ದಿನ್ ಬಾವ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಪ್ರಕಾಶ್ ಸಾಲಿಯಾನ್, ಅಲ್ಪಸಂಖ್ಯಾತ ವಿಭಾಗದ ಮುಹಮ್ಮದ್ ಸಮೀರ್ ಕಾಟಿಪಳ್ಳ, ಮಾಜಿ ಮೇಯರ್ ಗಳಾದ ಹರಿನಾಥ್, ಗುಲ್ಝಾರ್ ಬಾನು, ಮಾಜೀ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಕೆ. ಮುಹಮ್ಮದ್, ಶಾಹುಲ್ ಹಮೀದ್, ಗಿರೀಶ್ ಆಳ್ವ, ಅನಿಲ್ ಕುಮಾರ್, ಯು.ಕೆ ಮೋನಪ್ಪ ಮೊದಲಾದವರು ಉಪಸ್ಥಿತರಿದ್ದರು. ರೆಹಮಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು.