ಉಡುಪಿ ಜಿಲ್ಲೆಯಲ್ಲಿ ತಿಂಗಳ ಬಳಿಕ 98ರ ವೃದ್ಧ ಕೋವಿಡ್‌ಗೆ ಬಲಿ; 57 ಸಕ್ರಿಯ ಪ್ರಕರಣಗಳು

ಉಡುಪಿ: ಜಿಲ್ಲೆಯಲ್ಲಿ 33 ದಿನಗಳ ಬಳಿಕ ಕೋವಿಡ್ ಸಾಂಕ್ರಾಮಿಕ ಮತ್ತೊಂದು ಬಲಿ ಪಡೆದಿದೆ. ಉಡುಪಿಯ 98 ವರ್ಷ ಪ್ರಾಯದ ವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ಈ ಮೂಲಕ ಕೋವಿಡ್‌ಗೆ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 548 ಮಂದಿ ಮೃತರಾದಂತಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಮೃತಪಟ್ಟ 55ನೇ ವ್ಯಕ್ತಿ ಇವರಾಗಿದ್ದಾರೆ.
ಕೋವಿಡ್-19 ಗುಣಲಕ್ಷಣದೊಂದಿಗೆ ತೀವ್ರ ಜ್ವರದಿಂದ ಬಳಲುತಿದ್ದ ಇವರು ಆ.23ರಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಕೋವಿಡ್‌ಗೆ ಚಿಕಿತ್ಸೆ ಪಡೆಯುತಿದ್ದಾಗಲೇ, 26ರಂದು ಅವರು ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಆರು ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದು, ದಿನದಲ್ಲಿ 8 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 57 ಮಂದಿ ಕೋವಿಡ್‌ಗೆ ಚಿಕಿತ್ಸೆಯಲ್ಲಿದ್ದಾರೆ. ಇಂದು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಗೊಳಗಾದ 504 ಮಂದಿಯಲ್ಲಿ ಉಡುಪಿಯ ಆರು ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇವರಲ್ಲಿ ಇಬ್ಬರು ಪುರುಷರಾದರೆ ಉಳಿದ ನಾಲ್ವರು ಮಹಿಳೆಯರು.
ಇಂದು ಉಡುಪಿ ತಾಲೂಕಿನ ೨೦೪, ಕುಂದಾಪುರ ತಾಲೂಕಿನ 198 ಹಾಗೂ ಕಾರ್ಕಳ ತಾಲೂಕಿನ 102 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸ ಲಾಗಿತ್ತು. ಆರು ಮಂದಿಯಲ್ಲಿ ಒಬ್ಬರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರೆಲ್ಲ ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ೧೨ ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಐವರು ಐಸಿಯುನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು ೯೧೭ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ನಾಲ್ವರು ಮೊದಲ ಡೋಸ್, ಒಬ್ಬರು ಎರಡನೇ ಡೋಸ್ ಹಾಗೂ ೯೧೨ ಮಂದಿಗೆ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ.







