ದೇಶವನ್ನು ಪ್ರಕ್ಷುಬ್ಧತೆಯಲ್ಲಿ ಸಿಲುಕಿಸಬಹುದಾದ ಸವಾಲುಗಳನ್ನು ಗಮನಿಸಬೇಕು: ಡಾ.ಮುಹಮ್ಮದ್ ಸಾದ್ ಬೆಳಗಾಮಿ

ಬೆಂಗಳೂರು, ಆ.30: ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ್ದರೂ, ಇಂದಿನ ಪರಿಸ್ಥಿತಿಯು ಹಲವಾರು ಗಂಭೀರ ಕಳವಳಕಾರಿ ಅಂಶಗಳನ್ನು ಹೊಂದಿದೆ. ನಾವು ನಮ್ಮ ಸಾಧನೆ ಮತ್ತು ಅಭಿವೃದ್ಧಿಗಳನ್ನು ಪ್ರಶಂಸಿಸುವಾಗ, ದೇಶವನ್ನು ಪ್ರಕ್ಷುಬ್ಧತೆ ಮತ್ತು ಗೊಂದಲದಲ್ಲಿ ಸಿಲುಕಿಸಬಹುದಾದ ಸವಾಲುಗಳನ್ನು ಗಮನಿಸಬೇಕು ಎಂದು ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ, ನರಗುಂದ, ಶಿವಮೊಗ್ಗ, ಬೆಂಗಳೂರಿನಿಂದ ಮಂಗಳೂರಿನವರೆಗೆ ನಡೆದ ಕೊಲೆಗಳ ಸರಮಾಲೆಯು ನಮ್ಮ ರಾಜ್ಯದ ಕಾನೂನು ವ್ಯವಸ್ಥೆಯು ಕೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ನಮ್ಮ ನಗರಗಳಲ್ಲಿ ಜನಸಾಮಾನ್ಯರು ವಿಶೇಷವಾಗಿ ಹಿರಿಯ ನಾಗರಿಕರು ಸುರಕ್ಷಿತರಾಗಿಲ್ಲ. ನಮ್ಮ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಶೇ.80ರಷ್ಟು ಕೈದಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕರಣದಲ್ಲಿ ಕಂಡುಬಂದಂತೆ ಹಣ ಮತ್ತು ಅಧಿಕಾರದ ಪ್ರಭಾವದಿಂದ ನ್ಯಾಯಪಾಲನೆಯಲ್ಲಿ ವೈಫಲ್ಯ ತುಂಬಾ ನೋವಿನ ಸಂಗತಿ ಎಂದು ಮುಹಮ್ಮದ್ ಸಾದ್ ಹೇಳಿದರು.
ಮುಖ್ಯಮಂತ್ರಿಗಳ ಕ್ರಿಯೆ ಮತ್ತು ಪ್ರತಿಕ್ರಿಯೆ ಕುರಿತ ಹೇಳಿಕೆ ಮತ್ತು ನಮ್ಮ ರಾಜ್ಯಕ್ಕೆ ಯೋಗಿ ಮಾದರಿಯ ಸುಳಿವು ನೀಡಿರುವುದು ಶೋಚನೀಯ, ಆಲ್ಟ್ ನ್ಯೂಸ್‍ನ ಪತ್ರಕರ್ತ ಝುಬೇರ್ ಮತ್ತು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ವಿರುದ್ಧದ ಇತ್ತೀಚಿನ ಕಿರುಕುಳ ಮತ್ತು ಪ್ರಕರಣಗಳು ಇದಕ್ಕೆ ಸಂಬಂಧಿಸಿದ ಸ್ಪಷ್ಟ ಉದಾಹರಣೆಗಳಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬೆಳೆಯುತ್ತಿರುವ ಧ್ರುವೀಕರಣ ಮತ್ತು ಕೋಮುವಾದ: ರಾಜಕೀಯ ಗುರಿಗಳ ಅಂಧಾನುಸರಣೆಯಲ್ಲಿ ಸರಕಾರವು ಅಲ್ಪಸಂಖ್ಯಾತರನ್ನು ಬಲಿಪಶು ಮಾಡುವ ತನ್ನ ನೀತಿಯನ್ನು ಮುಂದುವರೆಸುತ್ತಿದೆ, ದ್ವೇಷ ಹರಡುವಿಕೆ, ವಿಭಜಿಸುವ ಮತ್ತು ಭಾವನಾತ್ಮಕ ವಿಷಯಗಳನ್ನು ಎತ್ತುವ ಮೂಲಕ ನಮ್ಮ ರಾಜ್ಯದಲ್ಲಿ ದೀರ್ಘ ಕಾಲದಿಂದ ನೆಲೆಸಿದ್ದ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವನ್ನು ಕದಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಹಿಜಾಬ್, ಆಝಾನ್, ಹಲಾಲ್ ಮಾಂಸ, ಆರ್ಥಿಕ ಬಹಿಷ್ಕಾರ ಇತ್ಯಾದಿಗಳಲ್ಲಿ ಇತ್ತೀಚಿನ ಪ್ರತಿರೋಧಗಳ ಹೊರತಾಗಿಯೂ, ಮದರಸಾಗಳ ಸ್ವಾಯತ್ತತೆ ಮತ್ತು ಈದ್ಗಾ ಮತ್ತು ಮಸೀದಿಗಳ ಮಾಲಕತ್ವವನ್ನು ಅತಿಕ್ರಮಿಸಲು ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಇವು ಸಾಮಾಜಿಕ ಸಾಮರಸ್ಯವನ್ನು ಕದಡಿದೆ, ಆರ್ಥಿಕ ಸಂಕಷ್ಟಗಳನ್ನು ಉಂಟುಮಾಡಿದ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯ ಮತ್ತು ದೇಶದ ಚಿತ್ರವನ್ನು ಕೆಡಿಸಿದೆ ಎಂದು ಮುಹಮ್ಮದ್ ಸಾದ್ ದೂರಿದರು.
ಮಹಿಳೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳು: ಮಹಿಳೆಯರು ಮತ್ತು ದುರ್ಬಲ ವರ್ಗಗಳು ತಾರತಮ್ಯ, ಅನ್ಯಾಯ, ಕಡೆಗಣಿಸುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಆರ್ಥಿಕತೆ, ಸಮಾನತೆ ಮತ್ತು ನ್ಯಾಯಕ್ಕೆ ಸಂಬಂಧಿಸಿದ ವಿವಿಧ ಸೂಚ್ಯಂಕಗಳಲ್ಲಿ ಅವರ ಸಾಧನೆ ಕಳಪೆಯಾಗಿವೆ. ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರಿಗಳ ಇತ್ತೀಚಿನ ಬಿಡುಗಡೆಯು ದೇಶದಾದ್ಯಂತ ನೈತಿಕ ಪ್ರಜ್ಞೆಯನ್ನು ಕುಲುಕಿದೆ. ಇಲ್ಲಿಯವರೆಗೂ ಪ್ರತಿಭಟನೆಗಳು ಮುಂದುವರೆದಿವೆ ಎಂದು ಅವರು ತಿಳಿಸಿದರು.
ಅಪರಾಧಿಗಳನ್ನು ಪುನಃ ಬಂಧಿಸಬೇಕು ಮತ್ತು ಪೀಡಿತ ಅಮಾಯಕರಲ್ಲಿ ವಿಶ್ವಾಸವನ್ನು ಪುನಃ ಸ್ಥಾಪಿಸಬೇಕು ಎಂಬ ಬೇಡಿಕೆಯಲ್ಲಿ ನಾವು ಸೇರುತ್ತೇವೆ. ಕುಡಿಯುವ ನೀರಿಗಾಗಿ ದಲಿತ ಬಾಲಕನ ಹತ್ಯೆಯು ನಮ್ಮ ಮುಂದುವರಿದ ದೇಶದಲ್ಲಿ ಅಸ್ಪೃಶ್ಯತೆ ಮತ್ತು ಜಾತೀಯತೆಯ ಬೇರೂರಿಕೆಯನ್ನು ತೋರಿಸುತ್ತದೆ ಎಂದು ಮುಹಮ್ಮದ್ ಸಾದ್ ಹೇಳಿದರು.
ಬರುವ ಚುನಾವಣೆಗಳು-ಸರಿಯಾದ ಆದ್ಯತೆಗಳು: 2023 ಮತ್ತು 2024 ದೇಶದ ದಿಕ್ಕು ಮತ್ತು ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿರುತ್ತದೆ. ಅಧಿಕಾರದ ಅಂಧಾನ್ವೇಷಣೆಯಲ್ಲಿರುವ ಫ್ಯಾಸಿಸ್ಟ್ ಶಕ್ತಿಗಳು ನಮ್ಮ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು, ಬಹುತ್ವ, ಒಕ್ಕೂಟ, ಸಾಂವಿಧಾನಿಕ ಮನೋಭಾವ ಮತ್ತು ಮೌಲ್ಯಗಳಿಗೆ ಗಂಭೀರ ಬೆದರಿಕೆಯನ್ನೂಡುತ್ತಿವೆ. ಅವರ ವೈಫಲ್ಯಗಳು ಮತ್ತು ಅತ್ಯಂತ ಗಂಭೀರವಾದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮುಚ್ಚಿಡಲು ರಾಷ್ಟ್ರೀಯತೆಯ ತಪ್ಪು ಪ್ರಜ್ಞೆಯನ್ನು ಪೆÇ್ರೀತ್ಸಾಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪೊಳ್ಳು ಘೋಷಣೆಗಳು, ಭರವಸೆಗಳು ಮತ್ತು ಅಪಪ್ರಚಾರಗಳಿಂದ ಜನಸಾಮಾನ್ಯರ ನೈಜ ಸಮಸ್ಯೆಗಳು ಮತ್ತು ದೇಶದ ಹಿತಾಸಕ್ತಿಗಳನ್ನು ಬದಿಗೆ ತಳ್ಳಲಾಗುತ್ತಿದೆ. ದೇಶದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ನೈತಿಕ ಅಧಃಪತನ, ಸ್ವಾರ್ಥ ಭ್ರಷ್ಟಾಚಾರ, ದ್ವೇಷ, ಸಾಮಾಜಿಕ ವಿಭಜನೆ ಮತ್ತು ಅವನತಿಯಿಂದ ಬದಲಾಯಿಸಲಾಗುತ್ತಿದೆ. ನಮ್ಮ ಪೂರ್ವಜರು ಮತ್ತು ಸಂವಿಧಾನದ ನೈಜ ಶಿಲ್ಪಿಗಳು ಕಲ್ಪಿಸಿದ ಭಾರತದ ನೈಜ ಕಲ್ಪನೆಯನ್ನು ಉಳಿಸಲು ನಾವು ಎಲ್ಲಾ ದೇಶವಾಸಿಗಳಿಗೆ ಎದ್ದೇಳುವಂತೆ ಕರೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯ ಎದುರಿಸುತ್ತಿರುವ ಅಪಾಯ ಮತ್ತು ನೈಜ ಸಮಸ್ಯೆಗಳನ್ನು ಮತದಾರರಿಗೆ ತಿಳಿಸಲು ಸಮಾನ ಮನಸ್ಕ ಬುದ್ಧಿಜೀವಿಗಳು, ಗುಂಪುಗಳು, ಎನ್‍ಜಿಒಗಳು ಮತ್ತು ಸಂಘಟನೆಗಳ ಸಹಕಾರದೊಂದಿಗೆ ಜಮಾತೆ ಇಸ್ಲಾಮಿ ಹಿಂದ್ ಶೀಘ್ರದಲ್ಲೇ ಒಂದು ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಮುಹಮ್ಮದ್ ಸಾದ್ ಬೆಳಗಾಮಿ ಹೇಳಿದರು.







