ಇರಾಕ್: ಅಧ್ಯಕ್ಷರ ಅರಮನೆಗೆ ನುಗ್ಗಿದ ಪ್ರತಿಭಟನಾಕಾರರು
ಘರ್ಷಣೆಯಲ್ಲಿ 30 ಮಂದಿ ಮೃತ್ಯು, ಕರ್ಫ್ಯೂ ಜಾರಿ

photo: AP
ಬಗ್ದಾದ್, ಆ.30: ಇರಾಕ್ ನ ಪ್ರಭಾವೀ ಶಿಯಾ ಧರ್ಮಗುರು ಮುಖ್ತದ ಅಲ್-ಸದರ್ ಅವರ ಬೆಂಬಲಿಗರ ಗುಂಪು ಹಾಗೂ ಇರಾನ್ ಬೆಂಬಲಿತ ಶಿಯಾ ಹೋರಾಟಗಾರರ ಮಧ್ಯೆ ಸೋಮವಾರ ಸಂಜೆಯಿಂದ ಆರಂಭವಾಗಿರುವ ಘರ್ಷಣೆ ಮಂಗಳವಾರವೂ ಮುಂದುವರಿದಿದೆ. ಪರಿಸ್ಥಿತಿ ನಿಯಂತ್ರಿಸಲು ಸರಕಾರದ ಪಡೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಗುಂಡಿನ ದಾಳಿಯಲ್ಲಿ ಇದುವರೆಗೆ ಕನಿಷ್ಟ 30 ಮಂದಿ ಮೃತಪಟ್ಟಿದ್ದು 380ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸರಕಾರದ ಮೂಲಗಳು ಹೇಳಿವೆ.
ರಾಜಕೀಯ ತ್ಯಜಿಸುವುದಾಗಿ ಅಲ್-ಸದರ್ ಘೋಷಿಸಿದ ಬಳಿಕ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಅತ್ಯಂತ ಬಿಗಿ ಭದ್ರತೆಯ ಗ್ರೀನ್ ಝೋನ್ಗೆ ರಾಕೆಟ್ನ ಮೂಲಕ ಗ್ರೆನೇಡ್ ಉಡಾಯಿಸಿದ್ದು ಅಧ್ಯಕ್ಷರ ಅರಮನೆಯನ್ನು ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ರಾಷ್ಟ್ರೀಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಮಧ್ಯೆ, ಇರಾಕ್ ಜತೆಗಿನ ಗಡಿಯನ್ನು ಮುಚ್ಚಲಾಗಿದ್ದು ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.
ಆ ದೇಶಕ್ಕೆ ಪ್ರಯಾಣಿಸದಂತೆ ನಾಗರಿಕರಿಗೆ ಸೂಚಿಸಲಾಗಿದೆ ಎಂದು ಇರಾನ್ ಘೋಷಿಸಿದೆ. ಬಗ್ದಾದ್ನ ರಸ್ತೆಗಳು ಮಂಗಳವಾರ ನಿರ್ಜನವಾಗಿದ್ದು , ಟ್ರಕ್ಗಳ ಮೇಲೇರಿದ ಬಂದೂಕುಧಾರಿಗಳು ತಮ್ಮ ಬಳಿಯಿರುವ ಗ್ರೆನೇಡ್ ಲಾಂಚರ್ಗಳನ್ನು ಪ್ರದರ್ಶಿಸುತ್ತಾ ಸಂಚರಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಗ್ರೀನ್ಝೋನ್ನಿಂದ ಹಿಂದಕ್ಕೆ ಸರಿಯುವಂತೆ ಪ್ರತಿಭಟನಾಕಾರರಿಗೆ ಇರಾಕ್ ಪಡೆ ಎಚ್ಚರಿಕೆ ನೀಡಿದೆ. ಇರಾಕ್ನ ಪರಿಸ್ಥಿತಿ ಅತ್ಯಂತ ಕಳವಳಕಾರಿ ಎಂದು ಬಣ್ಣಿಸಿರುವ ಅಮೆರಿಕ, ರಾಜಕೀಯ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವಂತೆ ಕರೆನೀಡಿದೆ. ಬಗ್ದಾದ್ನ ಗ್ರೀನ್ಝೋನ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಿಂದ ತಕ್ಷಣಕ್ಕೆ ರಾಜತಂತ್ರಜ್ಞರನ್ನು ವಾಪಾಸು ಕರೆಸಿಕೊಳ್ಳುವ ಅಗತ್ಯ ಕಾಣುತ್ತಿಲ್ಲ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ಇರಾಕ್ನಲ್ಲಿ ಕಳೆದ ಅಕ್ಟೋಬರ್ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅಲ್-ಸದರ್ ಬೆಂಬಲಿಗರು ಅತ್ಯಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರೂ ಬಹುಮತ ಪಡೆಯಲು ವಿಫಲವಾಗಿರುವುದರಿಂದ ಅಲ್ಲಿ ರಾಜಕೀಯ ಬಿಕ್ಕಟ್ಟು ಮೂಡಿದೆ. ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಯಬೇಕೆಂದು ಆಗ್ರಹಿಸುತ್ತಿದ್ದ ಅಲ್-ಸದರ್ ಸೋಮವಾರ ಅನಿರೀಕ್ಷಿತವಾಗಿ ರಾಜಕೀಯ ತ್ಯಜಿಸುವ ಘೋಷಣೆ ಮಾಡಿದ್ದಾರೆ. 2003ರಲ್ಲಿ ಸುನ್ನಿ ಸರ್ವಾಧಿಕಾರಿ ಸದ್ದಾಂ ಹುಸೇನ್ರನ್ನು ಅಮೆರಿಕ ನೇತೃತ್ವದ ಮೈತ್ರಿ ಪಡೆ ಪದಚ್ಯುತಗೊಳಿಸಿದಂದಿನಿಂದ ಇರಾಕ್ನಲ್ಲಿ ಸುನ್ನಿ ಮುಸ್ಲಿಮರ ಪಕ್ಷವೇ ಅಧಿಕಾರದಲ್ಲಿ ಮುಂದುವರಿಯುತ್ತಿದೆ.
ಆದರೆ ಅಲ್-ಸದರ್ ಅವರು ಇರಾಕ್ನಲ್ಲಿ ಅಮೆರಿಕ, ಇರಾನ್ ಸೇರಿದಂತೆ ಯಾವುದೇ ವಿದೇಶಿಯರ ಮಧ್ಯಪ್ರವೇಶವನ್ನು ವಿರೋಧಿಸುತ್ತಿದ್ದು ಇದು ಶಿಯಾ ಮುಸ್ಲಿಮರಲ್ಲೇ 2 ಗುಂಪುಗಳನ್ನು ಸೃಷ್ಟಿಸಿದ್ದು ಇರಾನ್ ಬೆಂಬಲಿತ ಶಿಯಾ ಗುಂಪು ಅಲ್ ಸದರ್ ಬೆಂಬಲಿತ ಗುಂಪನ್ನು ವಿರೋಧಿಸುತ್ತಿದೆ. ಅಲ್-ಸದರ್ ಸಾವಿರಾರು ಮಂದಿಯ ಬಲಿಷ್ಟ ಹೋರಾಟಗಾರರ ಪಡೆ ಹಾಗೂ ದೇಶದಾದ್ಯಂತ ಕೋಟ್ಯಾಂತರ ನಿಷ್ಟ ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಎದುರಾಳಿ ಗುಂಪಿಗೆ ಇರಾಕ್ನ ಬೆಂಬಲವಿದ್ದು ಇರಾಕ್ನ ಲ್ಲಿ ತರಬೇತಿ ಮತ್ತು ಶಸ್ತ್ರಾಸ್ತ್ರ ಪಡೆದಿರುವ ಹಲವು ಅರೆಸೇನಾ ಪಡೆಗಳ ಮೇಲೆ ನಿಯಂತ್ರಣ ಸಾಧಿಸಿದೆ.
ಪ್ರತಿಭಟನೆ ಅಂತ್ಯಕ್ಕೆ ಅಲ್-ಸದರ್ ಕರೆ
ಸರಕಾರದ ಇಲಾಖೆಗಳು ಹಾಗೂ ವಿದೇಶಿ ರಾಜತಾಂತ್ರಿಕ ಕಚೇರಿಗಳಿರುವ ಗ್ರೀನ್ಝೋನ್ ವಲಯದಿಂದ ತಕ್ಷಣ ಹಿಂದಕ್ಕೆ ಸರಿದು ಪ್ರತಿಭಟನೆ ಅಂತ್ಯಗೊಳಿಸುವಂತೆ ಇರಾಕ್ನ ಪ್ರಭಾವೀ ಶಿಯಾ ಮುಖಂಡ ಅಲ್-ಸದರ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಮಂಗಳವಾರ ಟಿವಿ ವಾಹಿನಿಯಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅಲ್-ಸದರ್,ಅಧ್ಯಕ್ಷರ ಅರಮನೆಗೆ ನುಗ್ಗಿ ಅಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿರುವವರು ಒಂದು ಗಂಟೆಯೊಳಗೆ ಪ್ರತಿಭಟನೆ ಕೈಬಿಟ್ಟು ಅಲ್ಲಿಂದ ತೆರಳುವಂತೆ ಮನವಿ ಮಾಡಿಕೊಂಡರು. ಈ ಮಧ್ಯೆ, ಇತರ ಟಿವಿ ವಾಹಿನಿಗಳಲ್ಲಿ ಪ್ರಸಾರವಾದ ನೇರಪ್ರಸಾರದಲ್ಲಿ ಗ್ರೀನ್ಝೋನ್ ವಲಯದಲ್ಲಿರುವ ಪ್ರತಿಭಟನಾಕಾರರ ಮೇಲೆ ಇರಾಕ್ನ ಭದ್ರತಾ ಪಡೆ ಗುಂಡು ಹಾರಿಸುತ್ತಿರುವ, ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡುತ್ತಿರುವ, ಗಾಯಗೊಂಡ ವ್ಯಕ್ತಿಯನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ಯುತ್ತಿರುವ ವೀಡಿಯೊ ಪ್ರಸಾರವಾಗಿದೆ.
ಅಧ್ಯಕ್ಷರ ಅರಮನೆಯ ಈಜುಕೊಳದಲ್ಲಿ ಪ್ರತಿಭಟನಾಕಾರರು
ಇರಾಕ್ನ ರಾಜಧಾನಿ ಬಗ್ದಾದ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಲ್-ಸದರ್ ಬೆಂಬಲಿಗರು ಅತ್ಯಂತ ಬಿಗಿಭದ್ರತೆಯ ಗ್ರೀನ್ಝೋನ್ಗೆ ಅಧ್ಯಕ್ಷರ ಅರಮನೆ ಪ್ರವೇಶಿಸಿದ ಬಳಿಕ ಅಲ್ಲಿರುವ ಈಜುಕೊಳದಲ್ಲಿ ಈಜಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ತಿಂಗಳು ಶ್ರೀಲಂಕಾದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಕೊಲಂಬೊದ ಅಧ್ಯಕ್ಷರ ಅರಮನೆಗೆ ನುಗ್ಗಿ ಅಲ್ಲಿದ್ದ ಈಜುಕೊಳಕ್ಕೆ ಧುಮುಕಿದ ಘಟನೆಯನ್ನು ಇದು ನೆನಪಿಸಿದೆ.
ರಾಜಕೀಯ ತ್ಯಜಿಸುವುದಾಗಿ ಅಲ್-ಸದರ್ ಸೋಮವಾರ ಘೋಷಿಸಿದ ಬಳಿಕ ಅಲ್-ಸದರ್ರನ್ನು ಬೆಂಬಲಿಸುವ ಹೋರಾಟಗಾರರ ಪಡೆ ಸರಾಯಾ ಸಲಾಮ್ ಮತ್ತು ಇರಾಕ್ನ ಸರಕಾರದ ಬೆಂಬಲವಿರುವ ‘ಪಾಪ್ಯುಲರ್ ಮೊಬಿಲೈಸೇಷನ್ ಯುನಿಟ್ಸ್’ ಹೋರಾಟಗಾರರ ಮಧ್ಯೆ ಘರ್ಷಣೆ ಭುಗಿಲೆದ್ದಿದೆ. ಅಲ್-ಸದರ್ ಬೆಂಬಲಿಸುವ ಪಡೆ ಗ್ರೀನ್ಝೋನ್ನ ಸರಕಾರಿ ಕಟ್ಟಡಗಳ ಹೊರಗಡೆ ನಿರ್ಮಿಸಿದ್ದ ಸಿಮೆಂಟ್ ಕಂಪೌಂಡ್ಗಳನ್ನು ಧ್ವಂಸಗೊಳಿಸಿ, ಅಧ್ಯಕ್ಷರ ಅರಮನೆಯೊಳಗೆ ನುಗ್ಗಿ ಈಜುಕೊಳ ಸೇರಿದಂತೆ ಅಲ್ಲಿದ್ದ ಎಲ್ಲಾ ಐಷಾರಾಮಿ ಸೌಲಭ್ಯವನ್ನು ಬಳಸಿಕೊಂಡರು ಎಂದು ವರದಿಯಾಗಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ಸ್ಟನ್ಗ್ರೆನೇಡ್(ಭಾರೀ ಸದ್ದು ಮತ್ತು ಬೆಳಕಿನೊಂದಿಗೆ ಸ್ಫೋಟಿಸುವ ಗ್ರೆನೇಡ್) ಸಿಡಿಸಿದರು. ಬಳಿಕ ವಿಶೇಷ ಕಾರ್ಯಾಚರಣೆ ಪಡೆಯ ಒಂದು ತುಕಡಿ, ಇರಾಕ್ ಸೇನೆಯ 9ನೇ ಬಟಾಲಿಯನ್ ಅನ್ನು ಗ್ರೀನ್ ಝೋನ್ ಗೆ ರವಾನಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾಕ್ ತೊರೆಯುವಂತೆ ನಾಗರಿಕರಿಗೆ ಕುವೈಟ್ ಸಲಹೆ
ಇರಾಕ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ , ಕುವೈಟ್ ಪ್ರಜೆಗಳು ಇರಾಕ್ ತೊರೆಯುವಂತೆ ಕುವೈಟ್ ರಾಯಭಾರಿ ಕಚೇರಿ ಸಲಹೆ ನೀಡಿದೆ ಎಂದು ಕುವೈಟ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇರಾಕ್ ತೊರೆಯುವಂತೆ ಮತ್ತು ಆ ದೇಶಕ್ಕೆ ಭೇಟಿ ನೀಡುವ ಯೋಜನೆಯನ್ನು ಮುಂದೂಡುವಂತೆ ಇರಾಕ್ನಲ್ಲಿರುವ ಕುವೈಟ್ ಪ್ರಜೆಗಳಿಗೆ ಸಲಹೆ ನೀಡಲಾಗಿದೆ. ಆದರೆ ಆ ದೇಶಕ್ಕೆ ವಿಮಾನ ಸಂಚಾರ ರದ್ದಾಗಿಲ್ಲ ಎಂದು ಕುವೈಟ್ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಜೋರ್ಡಾನ್ನ ವಿದೇಶಾಂಗ ಇಲಾಖೆಯೂ ತನ್ನ ನಾಗರಿಕರಿಗೆ ಇದೇ ರೀತಿಯ ಸಲಹೆ ನೀಡಿದೆ. ಬಗ್ದಾದ್ಗೆ ವಿಮಾನ ಸಂಚಾರ ಸ್ಥಗಿತಗೊಳಿಸಿದ್ದು ಇರಾಕ್ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ದುಬೈ ಘೋಷಿಸಿದೆ. ಸಂಯಮ ವಹಿಸುವಂತೆ ಮತ್ತು ಹಿಂಸಾಚಾರ ಕೊನೆಗೊಳಿಸುವಂತೆ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಇರಾಕ್ನ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದೆ.
Green Zone is a battlefield. #Iraq #Baghdad pic.twitter.com/owwF1nMAKQ
— Tammuz Intel (@Tammuz_Intel) August 29, 2022
It's dawn in Baghdad. #Iraq pic.twitter.com/lz3uMJw24b
— Joe Truzman (@JoeTruzman) August 30, 2022







