ಪಾಕಿಸ್ತಾನ: ಪ್ರವಾಹ ಸಂತ್ರಸ್ತರಿದ್ದ ದೋಣಿ ಮುಳುಗಿ 13 ಮಂದಿ ಮೃತ್ಯು

ಇಸ್ಲಮಾಬಾದ್, ಆ.30: ಪಾಕಿಸ್ತಾನದಲ್ಲಿ ಭೀಕರ ಪ್ರವಾಹದಿಂದ ಸಂತ್ರಸ್ತರಾದವರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುತ್ತಿದ್ದ ದೋಣಿಯು ಉಕ್ಕಿ ಹರಿಯುತ್ತಿದ್ದ ಇಂಡಸ್ ನದಿಯಲ್ಲಿ ಮುಳುಗಿದ ಕಾರಣ ಕನಿಷ್ಟ 13 ಮಂದಿ ಮೃತಪಟ್ಟಿದ್ದು 8 ಮಂದಿಯನ್ನು ರಕ್ಷಿಸಲಾಗಿದೆ. ದೋಣಿಯಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಿಂಧ್ ಪ್ರಾಂತದ ಸೆಹ್ವಾನ್ ಪ್ರದೇಶದ ಬಿಲಾವರ್ಪುರ ಗ್ರಾಮ ಜಲಾವೃತಗೊಂಡಿದ್ದು ಅಲ್ಲಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಮುಳುಗಿದ ದೋಣಿಯಲ್ಲಿದ್ದ ಇನ್ನೂ 4 ಮಂದಿಯ ಬಗ್ಗೆ ಇದುವರೆಗೆ ಯಾವುದೇ ಸುಳಿವು ಲಭಿಸಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ದೇಶದ ಹಲವೆಡೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು ಸರಕಾರ ಮತ್ತು ಸೇನೆಯು ರಕ್ಷಣೆ ಮತ್ತು ಪರಿಹಾರ ಒದಗಿಸುವ ಕಾರ್ಯ ನಡೆಸುತ್ತಿದೆ. ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಂಸ್ಥೆ ಹೇಳಿದೆ.